ಶ್ರೀನಗರ, ಮೇ. 22 (DaijiworldNews/AA): ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಗುರುವಾರ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ವೈಟ್ ನೈಟ್ ಕಾರ್ಪ್ಸ್, ಕಾರ್ಯಾಚರಣೆಯ ಸಮಯದಲ್ಲಿ ಭೀಕರ ಗುಂಡಿನ ಚಕಮಕಿ ನಡೆಯಿತು. ನಮ್ಮ ಧೈರ್ಯಶಾಲಿಗಳಲ್ಲಿ ಒಬ್ಬರು ಗುಂಡಿನ ಚಕಮಕಿಯಲ್ಲಿ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದೆ.
ಕಣಿವೆಯಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ನಾಲ್ವರು ಭಯೋತ್ಪಾದಕರು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಮೂರರಿಂದ ನಾಲ್ಕು ಭಯೋತ್ಪಾದಕರ ಗುಂಪಿನ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಪಡೆದ ನಂತರ ಜಂಟಿ ಭದ್ರತಾ ಪಡೆಗಳು ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು (CASO) ಪ್ರಾರಂಭಿಸಿದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕರನ್ನು ಎದುರಿಸಲು ಮತ್ತು ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ನೋಡಿಕೊಳ್ಳಲು ಸೇನೆಯನ್ನು ಸಜ್ಜುಗೊಳಿಸಲಾಗಿದೆ. ಜಂಟಿ ಪಡೆಗಳು ಹತ್ತಿರವಾಗುತ್ತಿದ್ದಂತೆ ಅಡಗಿಕೊಂಡಿದ್ದ ಭಯೋತ್ಪಾದಕರು ಗುಂಡು ಹಾರಿಸಿದರು. ಇದು ಪರಸ್ಪರರ ನಡುವೆ ಗುಂಡಿನ ಚಕಮಕಿಗೆ ಕಾರಣವಾಯಿತು. ಮೂರರಿಂದ ನಾಲ್ಕು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು ಅಡಗಿಕೊಂಡಿದ್ದಾರೆ ಎನ್ನಲಾಗಿದೆ.