ಬೆಂಗಳೂರು, ಜೂ20(Daijiworld News/SS): ನಾನೆಷ್ಟು ನೋವು ಅನುಭವಿಸಿಕೊಂಡು ಸರ್ಕಾರ ನಡೆಸುತ್ತಿದ್ದೇನೆ ಎಂದು ಹೇಳಲಾರೆ ಎಂದು ಸಿಎಂ ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರತಿ ದಿನವೂ ನಾನು ನೋವಿನಲ್ಲಿಯೇ ಕಳೆಯುತ್ತಿದ್ದೇನೆ. ನಾನು ನಿಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ಪ್ರತಿ ದಿನ ನಾನು ಅನುಭವಿಸುತ್ತಿರುವ ನೋವನ್ನು ನಿಮ್ಮೊಂದಿಗೆ ಹೇಳಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮೊಂದಿಗೆ ನನ್ನ ನೋವು ಹಂಚಿಕೊಳ್ಳಬೇಕೆಂಬ ಆಸೆ ಇದ್ದರೂ ಸಹ ನಾನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ನಾನು ರಾಜ್ಯದ ಜನರ ನೋವನ್ನು ನಿವಾರಿಸುವಲ್ಲಿ ನಿರತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಮ್ಮ ಮೈತ್ರಿ ಸರ್ಕಾರ ಐದು ವರ್ಷ ಪೂರೈಸುತ್ತದೆ ಎಂಬ ವಿಶ್ವಾಸ ನನಗಿದೆ. ಮೈತ್ರಿ ಸರ್ಕಾರ ಜನರ ಎಲ್ಲ ನಿರೀಕ್ಷೆಗಳನ್ನು ಪೂರ್ಣಗೊಳಿಸಿಯೇ ತೀರುತ್ತದೆ. 12 ವರ್ಷದ ಹಿಂದೆ ಪರಿಸ್ಥಿತಿ ಬೇರೆ ಇತ್ತು 12 ವರ್ಷದ ಹಿಂದೆ ಸಿಎಂ ಆಗಿದ್ದಾಗ ಇದ್ದಂತಹಾ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸ ಇದೆ. 12 ವರ್ಷದ ಹಿಂದೆ ಇದ್ದಂತಹಾ ಶಕ್ತಿ ಈಗ ಇಲ್ಲ. ಆದರೆ ಉತ್ಸಾಹ ಇದೆ. ಆರೋಗ್ಯದ ಸಮಸ್ಯೆ ಇದ್ದರೂ ಬದಿಗೊತ್ತಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.