ನವದೆಹಲಿ, ಜೂ20(Daijiworld News/SS): ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದೇಶದ ಎಲ್ಲೆಡೆ ಭಾರೀ ಸಿದ್ಧತೆ ನಡೆದಿದೆ.
2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಆಚರಿಸುವುದಾಗಿ ಘೋಷಿಸಿತು. ಆ ಮೂಲಕ ಭಾರತದ ಯೋಗಕ್ಕೆ ಅಧಿಕೃತವಾಗಿಯೇ ಜಾಗತಿಕ ಮಾನ್ಯತೆಯ ಮುದ್ರೆ ದೊರೆತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮವನ್ನು ರಾಂಚಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ಗಣ್ಯ ಅತಿಥಿಗಳು, ಯೋಗ ಸಂಘಟನೆಗಳು ಮತ್ತು ಯೋಗ ಗುರುಗಳು ಸೇರಿದಂತೆ 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ರಾಜಧಾನಿ ದಿಲ್ಲಿಯಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ ನಡೆದಿದೆ. ಪ್ರಮುಖ ಕಾರ್ಯಕ್ರಮ ರಾಜಪಥದಲ್ಲಿ ನಡೆಯಲಿದೆ.
ಭಾರತೀಯ ನೌಕಾಪಡೆ ಸಿಬ್ಬಂದಿಯೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗಾಭ್ಯಾಸದಿಂದ ಮಾನಸಿಕ ಒತ್ತಡಗಳಿಂದ ದೂರವಾಗಿ ರೋಗ ಮುಕ್ತರಾಗಲು ಯೋಗ ಉತ್ತಮ ಮಾರ್ಗ ಎಂದು ತಿಳಿಸಿರುವ ಭಾರತ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದೆ. ಇದರ ಅಂಗವಾಗಿ ಜೂನ್ 21ರಂದು ವಿಶ್ವಮಟ್ಟದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಭಾರತದಲ್ಲಿಯೂ ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಗುತ್ತಿದ್ದು, ಸಿನಿಮಾ ನಟರು, ಉದ್ಯಮಿಗಳು, ರಾಜಕಾರಣಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ರಾಷ್ಟ್ರದ ಹಲವೆಡೆ ಯೋಗಾಭ್ಯಾಸಗಳಲ್ಲಿ ತೊಡಗಿರುವ ಜನರು ಜೂನ್ 21ರಂದು ಸಾಮೂಹಿಕವಾಗಿ ಯೋಗ ಪ್ರದರ್ಶಿಸಲಿದ್ದಾರೆ.
ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ.