ಚಿಕ್ಕಮಗಳೂರು, ಜೂ20(Daijiworld News/SS): ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ವಿನಃ ಬೇರೇನೂ ಮಾಡುತ್ತಿಲ್ಲ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯದ ಸಹವಾಸವೇ ಬೇಡ ಎಂಬ ತೀರ್ಮಾನ ಮಾಡಿದ್ದು, ಮುಂದೆ ಯಾವುದೇ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ. ಇನ್ನು ಮುಂದೆ ರಾಜಕೀಯದಿಂದ ದೂರವಿರಲು ತೀರ್ಮಾನಿಸಿದ್ದೇನೆ. ಶ್ರೀರಾಮಸೇನೆಯ ಯಾವುದೇ ಮುಖಂಡರೂ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ. ಸಂಘಟನೆಯನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಅಲೆಯುವಂತೆ ಮಾಡಲಾಗಿದೆ. ಹಲವು ನಿಷ್ಠಾವಂತ ಕಾರ್ಯಕರ್ತರು ಹತ್ತಾರು ವರ್ಷದಿಂದ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ರಾಜಕೀಯ ಶಕ್ತಿ ಇದ್ದರೆ ಮಾತ್ರ ಇಂತಹವರಿಗೆ ನೆರವು ನೀಡಲು ಸಾಧ್ಯ ಎಂಬುದನ್ನು ಮನಗಂಡು ರಾಜಕೀಯ ಪ್ರವೇಶ ಮಾಡಿದ್ದೆ ಎಂದು ತಿಳಿಸಿದರು.
ರಾಜಕೀಯವಾಗಿ ನೆಲೆ ಕಂಡುಕೊಳ್ಳುವುದು ಕಷ್ಟವಾಗಿದೆ. ಹಣ, ಜಾತಿ ಮತ್ತು ಲಾಬಿ ಮಾಡುವ ಶಕ್ತಿ ಇದ್ದರೆ ಮಾತ್ರ ರಾಜಕೀಯದಲ್ಲಿ ನೆಲೆಯೂರಲು ಸಾಧ್ಯ. ಆದರೆ, ತಮಗೆ ಇದಾವುದೇ ಶಕ್ತಿ ಇಲ್ಲ. ಹಾಗಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಪಕ್ಷೇತರನಾಗಿ ಗೆದ್ದರೂ ಯಾರಿಗೂ ನೆರವು ನೀಡಲು ಸಾಧ್ಯವಿಲ್ಲ. ಬಿಜೆಪಿಯಾಗಲಿ, ಸಂಘಪರಿವಾರದವರಾಗಲಿ ನಿಷ್ಠಾವಂತ ಹಿಂದೂ ಪರ ಕಾರ್ಯಕರ್ತರಿಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು
ಸಂಘಪರಿವಾರದವರಿಗೆ ಪ್ರಾಮಾಣಿಕರು ಬೇಕಿಲ್ಲ. ಪ್ರವೀಣ್ ತೊಗಾಡಿಯಾ ಅವರಂತಹ ಹಿರಿಯ ಹಿಂದುತ್ವವಾದಿಯನ್ನೇ ಹೊರಹಾಕಿದ್ದಾರೆ. ಸಂಘಪರಿವಾರ ಮತ್ತು ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ವಿನಃ ಬೇರೇನೂ ಮಾಡುತ್ತಿಲ್ಲ ಎಂದು ದೂರಿದರು.