ನವದೆಹಲಿ, ಜೂ20(Daijiworld News/SS): ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಹಾದಿಯಲ್ಲಿ ಈ ಸರ್ಕಾರ ಸಾಗುತ್ತಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು.
ಮಹಿಳಾ ಸಬಲೀಕರಣ, ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರೈತರ ಕಲ್ಯಾಣವೇ ಸರ್ಕಾರದ ಪ್ರಮುಖ ಆದ್ಯತೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 61 ಕೋಟಿಗೂ ಹೆಚ್ಚು ಜನ ಮತ ಚಲಾಯಿಸಿದ್ದಾರೆ. ಇದು ಹೊಸ ದಾಖಲೆ ನಿರ್ಮಿಸಿದೆ. ಭಾರತದ ಜನ ಸರ್ಕಾರಕ್ಕೆ ಪೂರ್ಣ ಬಹುಮತ ನೀಡಿದ್ದಾರೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಹಾದಿಯಲ್ಲಿ ಈ ಸರ್ಕಾರ ಸಾಗುತ್ತಿದೆ’ ಎಂದು ಹೇಳಿದರು.
ಮುಂದಿನ ತಲೆಮಾರಿನವರಿಗಾಗಿ ನಾವು ನೀರನ್ನು ಸಂರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಜಲಶಕ್ತಿ ಸಚಿವಾಲಯ ಸ್ಥಾಪಿಸಿರುವುದು ನಿರ್ಣಾಯಕ ಹೆಜ್ಜೆ. ಅತಿ ಹೆಚ್ಚು ಸ್ಟಾರ್ಟ್ ಆ್ಯಪ್ಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು ಎಂದು ಹರ್ಷ ವ್ಯಕ್ತಪಡಿಸಿದರು.
ಮಹಿಳೆಯರ ಸಬಲೀಕರಣ ನನ್ನ ಸರ್ಕಾರದ ಪ್ರಮುಖ ಆದ್ಯತೆ. ಮಹಿಳೆಯರು ಬೆಳವಣಿಗೆ ಹೊಂದುವುದಷ್ಟೇ ಅಲ್ಲ, ಅಭಿವೃದ್ಧಿಯ ನೇತೃತ್ವ ವಹಿಸಿಕೊಳ್ಳುವಂತಾಗಬೇಕು. ‘ರಾಷ್ಟ್ರೀಯ ಜೀವನೋಪಾಯ ಮಿಷನ್’ ಅಡಿ ಗ್ರಾಮೀಣ ಪ್ರದೇಶದ 3 ಕೋಟಿ ಮಹಿಳೆಯರಿಗೆ 2 ಲಕ್ಷ ಕೋಟಿ ವಿತರಿಸಲಾಗಿದೆ. ದೇಶದ ಮಹಿಳೆಯರು ತ್ರಿವಳಿ ತಲಾಖ್, ನಿಖಾ–ಹಲಾಲದಂತಹ ಆಚರಣೆಗಳಿಂದ ದೂರವಿರಬೇಕು. ಆಯುಷ್ಮಾನ್ ಭಾರತ್ ಯೋಜನೆಯಿಂದ 26 ಲಕ್ಷ ಬಡ ರೋಗಿಗಳಿಗೆ ಪ್ರಯೋಜನವಾಗಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸ್ವ–ಉದ್ಯೋಗಕ್ಕಾಗಿ 19 ಕೋಟಿ ಜನರಿಗೆ ಸಾಲ ನೀಡಲಾಗಿದೆ. ಈ ಯೋಜನೆಯ ವ್ಯಾಪ್ತಿಯನ್ನು 30 ಕೋಟಿ ಜನರಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕಪ್ಪುಹಣದ ವಿರುದ್ಧದ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಬೇಕಿದೆ ಎಂದು ಹೇಳಿದರು.
ವೀರ ಯೋಧರ ಮಕ್ಕಳಿಗೆ ರಾಷ್ಟ್ರೀಯ ರಕ್ಷಣಾ ನಿಧಿ ಅನ್ವಯ ನೀಡಲಾಗುವ ವಿದ್ಯಾರ್ಥಿವೇತನದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಯೋಜನೆಗೆ ಪೊಲೀಸ್ ಸಿಬ್ಬಂದಿಯ ಮಕ್ಕಳನ್ನೂ ಸೇರ್ಪಡೆಗೊಳಿಸಿರುವುದು ಇದೇ ಮೊದಲು ಎಂದು ಕೋವಿಂದ್ ಮಾಹಿತಿ ನೀಡಿದರು