ಹೊಸದಿಲ್ಲಿ, ಜೂ20(Daijiworld News/SS): ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ ಎಲ್ಲ 13 ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ.
ವಿಮಾನಲ್ಲಿದ್ದ 13 ಜನರೂ ಸಾವಿಗೀಡಾಗಿದ್ದರಾದರೂ, ಅವರ ದೇಹವನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದೀಗ ಎಲ್ಲ ಶವಗಳನ್ನೂ ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ.
19 ಮಂದಿ ಚಾರಣಿಗರ ತಂಡದ ನೆರವಿನೊಂದಿಗೆ ದುರಂತ ಸ್ಥಳದಿಂದ ಶವಗಳನ್ನು ಮೇಲೆತ್ತಲಾಗಿದೆ. ಸೇನಾಪಡೆಯ ಗಾರ್ಡ್ ಕಮಾಂಡೋಗಳು ಮತ್ತು ವಿಶೇಷ ಪಡೆ ಸಿಬ್ಬಂದಿ ಈ ತಂಡದಲ್ಲಿದ್ದರು ಎನ್ನಲಾಗಿದೆ.
ವಿಂಗ್ ಕಮಾಂಡರ್ ಜಿಎಂ ಚಾರ್ಲ್ಸ್, ಎಸ್/ಎಲ್ ಎಚ್ ವಿನೋದ್, ಎಫ್/ಎಲ್ ಆರ್ ಥಾಪಾ, ಎಫ್/ಎಲ್ ಎ ತನ್ವಾರ್, ಎಫ್/ಎಲ್ ಎಸ್ ಮೊಹಾಂತಿ, ಎಫ್/ಎಲ್ ಎಂಕೆ ಗರ್ಗ್, ಡಬ್ಲ್ಯೂಒ ಕೆಕೆ ಮಿಶ್ರಾ, ಎಸ್ಜಿಟಿ ಅನೂಪ್ ಕುಮಾರ್, ಸಿಪಿಎಲ್ ಶೆರಿನ್, ಎಲ್ಎಸಿ ಎಸ್ಕೆ ಸಿಂಗ್, ಎಲ್ಎಸಿ ಪಂಕಜ್, ಎನ್ಸಿ (ಇ) ಪುಟಾಲಿ ಮತ್ತು ಎನ್ಸಿ (ಇ) ರಾಜೇಶ್ ಕುಮಾರ್ ಮೃತಪಟ್ಟವರು.
ಜೂನ್ 3ರಂದು ಜೊರ್ಹಾತ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನ ಅರ್ಧ ಗಂಟೆಯಲ್ಲಿ ಸಂಪರ್ಕ ಕಡಿದುಕೊಂಡು ದುರಂತಕ್ಕೀಡಾಗಿತ್ತು. ಬಳಿಕ ತೀವ್ರ ಹುಡುಕಾಟ ನಡೆಸಿದರೂ ವಿಮಾನದ ಅವಶೇಷಗಳು ಪತ್ತೆಯಾಗಿರಲಿಲ್ಲ. ಉಪಗ್ರಹಗಳ ನೆರವು ಪಡೆದು ಸತತ ಕಾರ್ಯಚರಣೆ ನಡೆಸಿದ 8 ದಿನಗಳ ಬಳಿಕ ವಿಮಾನ ದುರಂತಕ್ಕೀಡಾದ ಸ್ಥಳವನ್ನು ಪತ್ತೆಹಚ್ಚಲಾಗಿತ್ತು. ಆದರೆ ವಿಮಾನದಲ್ಲಿದ್ದವರ ಮೃತದೇಹಗಳು ಪತ್ತೆಯಾಗಿರಲಿಲ್ಲ.