ಬೆಂಗಳೂರು,ಜೂ20(DaijiworldNews/AZM): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಕೂಟದ ಒಂದು ವರ್ಷದ ಸಾಧನೆಗಳ ಪುಸ್ತಕವನ್ನು ಇಂದು ಬಿಡುಗಡೆ ಮಾಡಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಈ ಪುಸ್ತಕದಲ್ಲಿ ಪ್ರತಿ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ 30 ಲಕ್ಷ ಸಾಲ ಖಾತೆಗಳನ್ನು ಸಾಲ ಮನ್ನಾಕ್ಕೆ ಅರ್ಹ ಎಂದು ಗುರುತಿಸಲಾಗಿದೆ. 16 ಸಾವಿರ ಕೋಟಿ ರೂ. ಸಾಲದ ಮೊತ್ತವಾಗಿದ್ದು, ಇದುವರೆಗೆ ಅಗತ್ಯ ದಾಖಲೆ, ಸ್ವಯಂ ಘೋಷಣೆ ಸಲ್ಲಿಸಿ ಸಾಲ ಮನ್ನಾ ಸೌಲಭ್ಯಕ್ಕೆ ಅನುಮೋದನೆ ಪಡೆದ ರೈತರ ಸಂಖ್ಯೆ 23 ಲಕ್ಷವಾಗಿದೆ. ಇದರಲ್ಲಿ ಸಹಕಾರಿ ಬ್ಯಾಂಕ್ ಸಾಲ ಖಾತೆಗಳು 14 ಲಕ್ಷ, ವಾಣಿಜ್ಯ ಬ್ಯಾಂಕ್ ಖಾತೆ 9 ಲಕ್ಷಗಳಾಗಿವೆ.
ಈ ಫಲಾನುಭವಿಗಳ ಸಾಲ ಖಾತೆಗೆ ಈಗಾಗಲೇ 10,830 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ 2ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ವರ್ಷದ ಜುಲೈ ವೇಳೆಗೆ ಸಾಲ ಮನ್ನಾದ ಎಲ್ಲಾ ಹಣವನ್ನು ಬಿಡುಗಡೆ ಮಾಡಲಾಗುವುದು. ಯೋಜನೆ ಪೂರ್ಣಗೊಂಡಿದ್ದರೂ ಅರ್ಹ ರೈತರು ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿದರೆ ಸಾಲದ ಮೊತ್ತ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸರ್ಕಾರ ವಿವರಿಸಿದೆ.
ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಶೂನ್ಯ ಬಂಡಾವಳ ಕೃಷಿ, ಕರ್ನಾಟಕ ರೈತ ಸುರಕ್ಷ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ. ಸಿರಿಧಾನ್ಯ ಬೆಳೆಗೆ ಉತ್ತೇಜನ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ವಿಶೇಷ ಕೋಶ ರಚಿಸಿ ನಿರ್ದೇಶಕರನ್ನು ನಿಯೋಜಿಸುತ್ತಿರುವ ಬಗ್ಗೆ ತಿಳಿಸಲಾಗಿದೆ.
ತೋಟಗಾರಿಕೆ ಇಲಾಖೆಯಲ್ಲಿ ಇಂಡೋ ಇಸ್ರೇಲ್ ಸಹಭಾಗಿತ್ವದಲ್ಲಿ ಕೋಲಾರ, ಬಾಗಲಕೋಟೆ, ಧಾರವಾಡದಲ್ಲಿ ಉತ್ಕøಷ್ಟತಾ ಕೇಂದ್ರಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಪರಿಚಯಿಸಲಾಗುತ್ತಿದೆ. ಅಪರೂಪದ ಎಕ್ಸಾಟಿಕ್ ಹಣ್ಣುಗಳ ತಳಿ ಬೆಳೆಯಲು ಒತ್ತು ನೀಡಲಾಗಿದೆ. ಒಣಗಿದ ತೆಂಗು ಮರಗಳಿಗೆ 110ಕೋಟಿ ರೂ. ಪರಿಹಾರ ನೀಡಲಾಗಿದೆ. ರಾಷ್ಟ್ರೀಯ ಮೇವು ಭದ್ರತಾ ನೀತಿ ರೂಪಿಸಿ ಜಾನುವಾರುಗಳ ಮೇವಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.
ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ ನೀಡಲಾ ಗುತ್ತಿದ್ದು, ಮತ್ಸ್ಯಜೋಪಾಸನೆ ಯೋಜನೆಯಡಿ 19 ಶಿಥಿಲೀಕರಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿ ಕಾಯಕ ಬಡವರ ಬಂಧು ಯೋಜನೆ ಜನಪ್ರಿಯಗೊಂಡಿದ್ದು, ಬಡವರ ಬಂಧು ಯೋಜನೆಯಡಿ 18,973 ವ್ಯಾಪಾರಿಗಳಿಗೆ 11.23 ಕೋಟಿ ರೂ.ಸಾಲ ಸೌಲಭ್ಯ ನೀಡಲಾಗಿದೆ. ಕಾಯಕ ಯೋಜನೆಯಡಿ ಶೂನ್ಯ ಬಡ್ಡಿ ದರ ಮತ್ತು ಶೇ.4ರ ಬಡ್ಡಿ ದರದಲ್ಲಿ ಈವರೆಗೂ 232 ಸ್ವಸಹಾಯ ಗುಂಪುಗಳಿಗೆ 12.5 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಲಾಗಿದೆ.