ಬೆಂಗಳೂರು, ಜೂ 20 (Daijiworld News/SM): ಸಚಿವ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿಕೆಶಿ ಅವರ ತಾಯಿ ಅವರಿಗೆ ಐಟಿ ಇಲಾಖೆ ನೀಡಿದ್ದ ಶೋಕಾಸ್ ನೋಟೀಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರತಿವಾದಿ ಐಟಿ ಸೆಲ್ ಗೆ ನೋಟೀಸ್ ನೀಡಿ ಸಮಗ್ರ ವಿವರಣೆ ನೀಡುವಂತೆ ಹೇಳಿದೆ.
ಅಕ್ರಮ ಆಸ್ತಿ ಗಳಿಕೆಯ ವಿಚಾರದಲ್ಲಿ ಐಟಿಯ ಬೇನಾಮಿ ಸೆಲ್, ಆಸ್ತಿ ಜಪ್ತಿಗೆ ಐಟಿ ಇಲಾಖೆಯ ಅಧಿಕಾರಿ ಶೋಕಾಸ್ ನೋಟಿಸ್ ನೀಡಿತ್ತು. ಈ ಸಂಬಂಧ ಶೋಕಾಸ್ ನೋಟೀಸ್ ರದ್ದು ಕೋರಿ ಗೌರಮ್ಮ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಪ್ರತಿವಾದಿಗಳಿಗೆ ನೋಟೀಸ್ ಜಾರಿಗೊಳಿಸಿದೆ.
ಗೌರಮ್ಮ ಅವರ ಕುಟುಂಬ ಸಾಕಷ್ಟು ಜಮೀನು ಹೊಂದಿದೆ. ಕೃಷಿಯಿಂದ ಹಣವನ್ನು ಸಂಪಾದನೆ ಮಾಡುತ್ತಿದೆ. 2016ರಲ್ಲಿ ಬೇನಾಮಿ ಆಸ್ತಿ ಕಾಯ್ದೆ ಜಾರಿಗೆ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಗೌರಮ್ಮ ವಿರುದ್ಧ ಐಟಿ ಮಾಡಿರುವ ಆರೋಪ ಅವರ ಮೇಲೆ ಅನ್ವಯವಾಗುವುದಿಲ್ಲ ಎಂಬುವುದಾಗಿ ಗೌರಮ್ಮ ಪರ ವಕೀಲರು ವಾದಿಸಿದ್ದಾರೆ. ವಾದ ಆಲಿಸಿದ ನ್ಯಾಯ ಪೀಠ ಐಟಿ ಇಲಾಖೆಗೆ ನೋಟೀಸ್ ಜಾರಿಗೊಳಿಸಿ ಉತ್ತರ ನೀಡುವಂತೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.