ಹಿಮಾಚಲ ಪ್ರದೇಶ,ಜೂ20(DaijiworldNews/AZM): ಖಾಸಗೀ ಬಸ್ಸೊಂದು ಕಮರಿಗೆ ಉರುಳಿ ಸುಮಾರು 25 ಪ್ರಯಾಣಿಕರು ಸಾವನ್ನಪ್ಪಿ,35 ಪ್ರಯಾಣಿಕರಿಗೆ ಗಂಭೀರ ಗಾಯಗಳಾದ ಘಟನೆ ಹಿಮಾಚಲ ಪ್ರದೇಶದ ಕುಲ್ಲುವಿನ ಬಂಜಾರ್ ಎಂಬಲ್ಲಿ ಇಂದು ನಡೆದಿದೆ. ಬಸ್ ನಲ್ಲಿ ಸುಮಾರು 60 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಂಜಾರ್ನಿಂದ ಗಡಗೂಶನಿ ಪ್ರದೇಶಕ್ಕೆ ತೆರಳುತ್ತಿದ್ದ ಬಸ್ನ ಟಾಪ್ನಲ್ಲಿಯೂ ಜನರು ಕುಳಿತಿದ್ದರು. ಕೆಲವರಿಗೆ ಗಂಭೀರ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಗಾಯಾಳುಗಳನ್ನು ಸಮೀಪದ ಕುಲ್ಲು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಜಾರ ತಾಲ್ಲೂಕಿನ ಧೋತ್ ಮೋರ್ಹ್ ಸಮೀಪದಲ್ಲಿ ಸುಮಾರು 300 ಮೀಟರ್ ಆಳದ ಕಮರಿಗೆ ಬಿದ್ದಿದೆ. ಬಸ್ನ ಮೇಲ್ಭಾಗ ಸಂಪೂರ್ಣ ಪುಡಿಯಾಗಿದೆ. ಕಲ್ಲುಗಳಿಂದ ಕೂಡಿದ ಕಮರಿಯ ಭಾಗದಲ್ಲಿ ನೀರು ಹರಿಯುತ್ತಿತ್ತು. ಹೀಗಾಗಿ ಹಾನಿ ಪ್ರಮಾಣ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟುಮಾಡಿದೆ.
ಸುಮಾರು 12 ಮಹಿಳೆಯರು, 10 ಮಕ್ಕಳು ಮತ್ತು ಪುರುಷರನ್ನು ರಕ್ಷಿಸಲಾಗಿದೆ ಎಂದು ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ. ನಿಲ್ದಾಣದಿಂದ ಹೊರಟ ಬಸ್ ಹೆಚ್ಚೆಂದರೆ ಎರಡು ಕಿ.ಮೀ. ದೂರ ಸಾಗಿತ್ತು. ಟಾಪ್ನಲ್ಲಿಯೂ ಪ್ರಯಾಣಿಕರು ಕುಳಿತಿದ್ದರಿಂದ ಭಿಯೋತ್ ಎಂಬಲ್ಲಿ ಕಿರಿದಾದ ತಿರುವಿನಲ್ಲಿ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದೆ ಎನ್ನಲಾಗಿದೆ.