ನವದೆಹಲಿ, ಜೂ21(Daijiworld News/SS): ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ ದೇಶದಾದ್ಯಂತ ಯೋಗ ಪ್ರದರ್ಶನ ಮಾಡುವ ಮೂಲಕ ಯೋಗದಿನ ನಡೆಯುತ್ತಿದೆ. ವಿಶ್ವಸಂಸ್ಥೆ 'ಯೋಗ ದಿನ'ವನ್ನು ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳಿಂದ ಮತ್ತಷ್ಟು ಹೊಳಪು ಪಡೆದುಕೊಂಡಿದೆ.
2014ರ ಸೆ.27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಿಸುವ ಪ್ರಸ್ತಾಪವನ್ನಿಟ್ಟಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ವಿಶ್ವಸಂಸ್ಥೆ, ಜೂನ್ 21 ರಂದು ಯೋಗ ದಿನ ಆಚರಿಸಲು ಒಪ್ಪಿಗೆ ಸೂಚಿಸಿತ್ತು. 2015ರ ಜೂನ್ 21ರಂದು ಮೊದಲ ಯೋಗ ದಿನವನ್ನು ಆಚರಿಸಲಾಗಿತ್ತು.
2014ರಿಂದ ವಿಶ್ವಸಂಸ್ಥೆ ಗುರುತಿಸಿದ ಯೋಗ ದಿನಕ್ಕೆ ಈ ಬಾರಿ 'ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್' ಎಂಬುದು ಈ ಬಾರಿಯ ಘೋಷವಾಕ್ಯವಾಗಿದೆ. ಈ ಘೋಷವಾಕ್ಯ ಮುಂದಿಟ್ಟುಕೊಂಡು, ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ.
ಈ ವರ್ಷದ ಯೋಗ ದಿನದ ಅಂಗವಾಗಿ ದೇಶಕ್ಕೆ ಕರೆ ಕೊಟ್ಟಿರುವ ಪ್ರಧಾನಿ ಮೋದಿ, ಈ ಬಾರಿ ಯೋಗದ ಉದ್ದೇಶ ಶಾಂತಿ, ಸದ್ಭಾವ ಮತ್ತು ಸಮೃದ್ಧಿಗಾಗಿ ಆಗಿರಲಿ. ಯೋಗ ಪ್ರತಿಯೊಬ್ಬರ ಬದುಕಿನ ಜೀವನ ವಿಧಾನವಾಗಲಿ. ಯೋಗವನ್ನು ನಿಮ್ಮ ಜೀವನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಇತರರಿಗೂ ಯೋಗ ಮಾಡಲು ಸ್ಫೂರ್ತಿಯಾಗಿ, ಯೋಗದಿಂದ ಮನಸ್ಸು ಮತ್ತು ದೈಹಿಕ ಆರೋಗ್ಯ ಹೆಚ್ಚು ಲಾಭವಿದೆ ಎಂದು ಹೇಳಿದ್ದಾರೆ.