ರಾಂಚಿ, ಜೂ21(Daijiworld News/SS): ಯೋಗ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಜಾರ್ಖಂಡ್ನ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಸುಮಾರು 40 ಸಾವಿರ ಜನರ ಜತೆ ಯೋಗ ಮಾಡಿ, ಬಳಿಕ ಜನತೆಯುನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ. ಈ ಯೋಗ ಎಲ್ಲರಿಗೂ ದಕ್ಕಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಯುವ ಸಮುದಾಯ ಯೋಗವನ್ನು ಅಭ್ಯಾಸ ಮಾಡಬೇಕು. ಯೋಗ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಇದು ಆರೋಗ್ಯ ಪೂರ್ಣ ವಾತಾವರಣ ನಿರ್ಮಿಸಲು ಸಹಕಾರಿಯಾಗಲಿದೆ.ದೇಶದ ಎಲ್ಲ ನಾಗರಿಕರೂ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು. ಇದನ್ನು ಕಡ್ಡಾಯವಾಗಿ ಪಾಲಿಸಿದರೆ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಯೋಗವು ಪುರಾತನವೂ ಹೌದು, ಆಧುನಿಕವೂ ಹೌದು. ಅದು ಸ್ಥಿರವಾಗಿದ್ದು, ನಿರಂತರವಾಗಿ ಸುಧಾರಣೆ ಕಾಣುತ್ತಲೇ ಇದೆ. ಯೋಗ ಎಂದರೆ ಆರೋಗ್ಯವಂತ ದೇಹ, ಸಮಚಿತ್ತ ಮತ್ತು ಏಕತೆಯ ಪ್ರತೀಕ. ಈ ಮಹತ್ವ ಮತ್ತು ಮೌಲ್ಯಗಳು ಅಂದಿಗೂ, ಇಂದಿಗೂ ಸ್ಥಿರವಾಗಿಯೇ ಉಳಿದಿವೆ ಎಂದು ಹೇಳಿದರು.
2014ರಿಂದ ವಿಶ್ವಸಂಸ್ಥೆ ಗುರುತಿಸಿದ ಯೋಗ ದಿನಕ್ಕೆ ಈ ಬಾರಿ 'ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್' ಎಂಬ ಘೋಷವಾಕ್ಯವನ್ನು ನಿಗದಿಗೊಳಿಸಲಾಗಿದೆ. ಈ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ''ಯೋಗವನ್ನು ನಿಮ್ಮ ಜೀವನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಇತರರಿಗೂ ಯೋಗ ಮಾಡಲು ಸ್ಫೂರ್ತಿಯಾಗಿ, ಯೋಗದಿಂದ ಮನಸ್ಸು ಮತ್ತು ದೈಹಿಕ ಆರೋಗ್ಯ ಹೆಚ್ಚು ಲಾಭವಿದೆ'' ಎಂದು ಹೇಳಿದ್ದಾರೆ.