ಮುಂಬೈ, ಜೂ21(Daijiworld News/SS): ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ, ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ವಿಚಾರಣೆಗೆ ಖುದ್ದು ಹಾಜರಾತಿ ವಿನಾಯತಿ ಕೋರಿ ಸಲ್ಲಿಸಿದ್ದ ಅರ್ಜಿ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.
ಅನಾರೋಗ್ಯ ಹಾಗೂ ದೈಹಿಕ ಪರಿಸ್ಥಿತಿಯನ್ನು ಗಮನಿಸಿ, ಶಾಶ್ವತವಾಗಿ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಸಾಧ್ವಿ ಆಗಿರುವುದರಿಂದ ಕಠಿಣ ನೀತಿ, ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹೀಗಾಗಿ, ಭೋಪಾಲ್'ನಿಂದ ಮುಂಬೈಗೆ ವಿಚಾರಣೆಗಾಗಿ ಪ್ರತಿ ವಾರ ಪ್ರಯಾಣ ಮಾಡುವುದು ಕಷ್ಟಕರ. ವಿನಾಯತಿ ನೀಡಿ ಎಂದು ಪ್ರಗ್ಯಾ ಪರ ವಕೀಲ ಜೆಪಿ ಮಿಶ್ರಾ ಅವರು ಅರ್ಜಿ ಹಾಕಿದ್ದರು. ಆದರೆ ವಿನಾಯತಿ ಕೋರಿ ಸಲ್ಲಿಸಿದ್ದ ಅರ್ಜಿ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.
ಪ್ರಗ್ಯಾ ಸಿಂಗ್ ಠಾಕೂರ್ ಅವರು ಕಳೆದ ಬಾರಿ ನ್ಯಾಯಾಲಯಕ್ಕೆ ಹಾಜರಾದಾಗ ಯಾವುದೇ ಸ್ಫೋಟದ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿಳಿಸಿದ್ದರು.
2008ರ ಸೆ.29ರಂದು ಮಹಾರಾಷ್ಟ್ರದ ಮಾಲೇಗಾಂವ್'ನ ಮಸೀದಿ ಬಳಿ ನಿಲ್ಲಿಸಿದ ಮೋಟರ್ ಸೈಕಲ್ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿ, ಸುಮಾರು 100 ಮಂದಿ ಗಾಯಗೊಂಡಿದ್ದರು. ಈ ಸ್ಫೋಟಕ್ಕೆ ಹಿಂದೂ ತೀವ್ರವಾದಿಗಳು ಕಾರಣ ಎಂದು ಶಂಕೆ ವ್ಯಕ್ತವಾಗಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.