ಬೆಂಗಳೂರು, ಜೂ 21 (Daijiworld News/MSP): ರಾಜ್ಯದಲ್ಲಿ ಮದ್ಯಂತರ ಚುನಾವಣೆ ನಡೆಯಲಿದೆ. ಈ ಬಗ್ಗೆ ಸಂಶಯವೇ ಇಲ್ಲ. ಆದರೆ ಇದೀಗ ಸರ್ಕಾರ ನಡೆಸಲು ಕಾಂಗ್ರೆಸ್ಗೆ ಮನಸ್ಸು ಇದೆಯಾ ಅಥವಾ ಇಲ್ಲವಾ ಅನ್ನೋದು ನಂಗೆ ಗೊತ್ತಿಲ್ಲ. ಇಲ್ಲಿ ಎಲ್ಲಾ ವಿಚಾರಕ್ಕೂ ಆಕ್ಷನ್ ಆಂಡ್ ರಿಯಾಕ್ಷನ್ ನೆಸೆಸರಿ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ಪದ್ಮನಾಭನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ ಮಾಡಲೇಬೇಕು ಎನ್ನುವ ಅನಿವಾರ್ಯತೆ ನಮಗೆ ಇರಲಿಲ್ಲ. ಆದರೆ ಕಾಂಗ್ರೆಸ್ ನ ದೆಹಲಿ ನಾಯಕರು ಬಂದು ನಿಮ್ಮ ಮಗನನ್ನ ಮುಖ್ಯಮಂತ್ರಿ ಮಾಡ್ಬೇಕು, ಸರ್ಕಾರ ರಚಿಸಬೇಕು ಎಂದು ಒತ್ತಡ ಹಾಕಿದ್ದರು ಎಂದು ತಿಳಿಸಿದರು.
ಮೈತ್ರಿ ಸರ್ಕಾರ ಬೇಕು ಎಂದು ನಾವು ಹೇಳಿಲ್ಲ. ಸಿಎಂ ಹುದ್ದೆ ಬೇಕು ಎಂದು ಕೂಡಾ ನಾವು ಕೇಳಿಲ್ಲ. ಕಾಂಗ್ರೆಸ್ ಹೇಳಿದಂತೆ ಕೇಳಿಕೊಂಡು ಒಂದು ವರ್ಷದಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಮೈತ್ರಿ ಸರ್ಕಾರವನ್ನು ಮುಂದುವರಿಸಿಕೊಂಡು ಹೋಗುವುದು , ಬಿಡುವುದು ಕಾಂಗ್ರೆಸ್ ನವರ ಕೈಯಲ್ಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ರಚಿಸಿ ಎಂದು ದುಂಬಾಲು ಬಿದ್ದ ಕಾಂಗ್ರೆಸ್ ನಾಯಕರೇ ಇದೀಗ ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ರಾಹುಲ್ ಗಾಂಧಿಗೆ ದೂರು ಸಲ್ಲಿಸಿದ್ದಾರೆ ಎಂದು ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಎಲ್ಲವೂ ಕಾಂಗ್ರೆಸ್ ನವರ ಕೈಯಲ್ಲಿಯೇ ಇದೆ ಎಂದರು.