ಬೆಂಗಳೂರು, ಜೂ21(Daijiworld News/SS): ರಾಜ್ಯದಲ್ಲಿ ಆಡಳಿತ ನಡೆಸುವ ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಲಿ, ನಾವು ಆಡಳಿತ ನಡೆಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ. ಈ ಬಗ್ಗೆ ಸಂಶಯವೇ ಇಲ್ಲ. ಬಿ ಎಸ್ ಯಡಿಯೂರಪ್ಪ ಸಿಎಂ ಆಗ್ಬಾರ್ದು ಅಂತಾ ಕಾಂಗ್ರೆಸ್ನವರು ಓಡಿ ಬಂದ್ರು. ಎಲ್ಲ ಚರ್ಚೆ ಮಾಡದೇ ಸರಕಾರ ರಚನೆಗೆ ಮುಂದಾದ್ರು. ಬಳಿಕ ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದ್ರು. ಆದರೆ ಈಗ ಒನ್ ಥರ್ಡ್ ನಿಯಮವೂ ಇಲ್ಲ, ಏನೂ ಇಲ್ಲ. ನಮ್ಮ ಒಂದು ಮಂತ್ರಿ ಸ್ಥಾನವನ್ನೂ ಕಾಂಗ್ರೆಸ್ಗೆ ಸರಂಡರ್ ಮಾಡಿದಿವಿ ಎಂದು ದೇವೇಗೌಡರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್ನ ಹೇಳಿಕೆಗಳು ಗೊಂದಲದ ಗೂಡಾಗಿದೆ. ಮನಸ್ಸಿಗೆ ಬಂದಂತೆ ಮಾತಾಡಿ ಗೊಂದಲ ಸೃಷ್ಟಿಸಬಾರದು. ಒಂದೇ ವರ್ಷದಲ್ಲಿ ಮತ್ತೊಂದು ಚುನಾವಣೆಗೆ ನಾವು ಹಾಗೂ ಜನತೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಹಿರಿಯ ರಾಜಕಾರಣಿ ದೇವೇಗೌಡರು ಸತ್ಯವನ್ನೇ ಹೇಳಿದ್ದಾರೆ. ಸರ್ಕಾರ ಬೀಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದರು. ಈಗ ಸತ್ಯ ರಾಜ್ಯದ ಜನರಿಗೆ ಗೊತ್ತಾಗಿದೆ. ಗೊಂದಲದಿಂದಲೇ ಸರ್ಕಾರ ಬೀಳಲಿದೆ ಎಂಬುದು ಗೌಡರ ಮಾತಿನಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ನವರು ಮಧ್ಯಂತರ ಚುನಾವಣೆ ಬೇಡ ಎಂದರೆ, ದೇವೇಗೌಡರು ಮಧ್ಯಂತರ ಚುನಾವಣೆ ಅಂತಾರೆ. ಮಧ್ಯಂತರ ಚುನಾವಣೆಯಿಂದ ಜನರಿಗೆ ಮತ್ತೆ ಹೊರೆ ಆಗಲಿದೆ. ಹೀಗಾಗಿ ನಾವು ಮಧ್ಯಂತರ ಚುನಾವಣೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.