ನವದೆಹಲಿ, ಜೂ21(Daijiworld News/SS): ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ ಎಲ್ಲ 13 ಮಂದಿಯ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಯೋಧರ ಪಾರ್ಥಿವ ಶರೀರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌರವ ಸಲ್ಲಿಸಿದ್ದಾರೆ.
ಜೂ.3ರಂದು ಜೊರ್ಹಾತ್ ವಾಯುನೆಲೆಯಿಂದ ಹೊರಟಿದ್ದ ಈ ವಿಮಾನ ಅರ್ಧ ಗಂಟೆಯಲ್ಲಿ ಸಂಪರ್ಕ ಕಡಿದುಕೊಂಡು ದುರಂತಕ್ಕೀಡಾಗಿತ್ತು. ಬಳಿಕ ತೀವ್ರ ಹುಡುಕಾಟ ನಡೆಸಿದರೂ ವಿಮಾನದ ಅವಶೇಷಗಳು ಪತ್ತೆಯಾಗಿರಲಿಲ್ಲ. ಉಪಗ್ರಹಗಳ ನೆರವು ಪಡೆದು ಸತತ ಕಾರ್ಯಚರಣೆ ನಡೆಸಿದ 8 ದಿನಗಳ ಬಳಿಕ ವಿಮಾನ ದುರಂತಕ್ಕೀಡಾದ ಸ್ಥಳವನ್ನು ಪತ್ತೆಹಚ್ಚಲಾಗಿತ್ತು. ಆದರೆ ವಿಮಾನದಲ್ಲಿದ್ದವರ ಮೃತದೇಹಗಳು ಪತ್ತೆಯಾಗಿರಲಿಲ್ಲ. ಜೂ.20ರಂದು 19 ಮಂದಿ ಚಾರಣಿಗರ ತಂಡದ ನೆರವಿನೊಂದಿಗೆ ದುರಂತ ಸ್ಥಳದಿಂದ ಯೋಧರ ಮೃತದೇಹಗಳನ್ನು ಮೇಲೆತ್ತಲಾಗಿತ್ತು.
ಯೋಧರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ಕಳುಹಿಸುವ ಮುನ್ನ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಡಲಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಲಂ ವಿಮಾನ ನಿಲ್ದಾಣದಲ್ಲಿ ಯೋಧರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.