ನವದೆಹಲಿ, ಜೂ 21 (Daijiworld News/SM): ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೊಸ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸುವಲ್ಲಿ ಯಶಸ್ವಿಯಾಗಿದೆ. ಮುಸ್ಲಿಮ್ ಮಹಿಳೆಯರ ಹಕ್ಕು ರಕ್ಷಿಸುವಲ್ಲಿ ಈ ಮಸೂದೆ ನ್ಯಾಯ ಒದಗಿಸಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
2ನೇ ಬಾರಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಸಂಸತ್ ಅಧಿವೇಶನದಲ್ಲಿಯೇ ಹೊಸ ಮಸೂದೆಯನ್ನು ಮಂಡಿಸಿದೆ. ಸಂವಿಧಾನ ಹಕ್ಕಿನ ಉಲ್ಲಂಘನೆ ಎಂದು ಆರೋಪಿಸಿರುವ ವಿರೋಧ ಪಕ್ಷ ಈ ವಿಚಾರವಾಗಿ ತೀವ್ರ ಗದ್ದಲವನ್ನು ಎಬ್ಬಿಸಿದೆ. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದ್ದು, ದೇಶದಲ್ಲಿ ಈವರೆಗೆ ಸುಮಾರು 543 ತ್ರಿವಳಿ ತಲಾಖ್ ಪ್ರಕರಣಗಳು ದಾಖಲಾದ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದರು.
ಈಗಾಗಲೇ ತ್ರಿವಳಿ ತಲಾಕ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆ ಬಳಿಕ ಸುಮಾರು 200 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ. ಮಹಿಳೆಯರ ವ್ಯಕ್ತಿತ್ವದ ವಿಚಾರ ಕೂಡ ಇದಾಗಲಿದೆ. ಮಹಿಳೆಯರ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ. ಲೋಕಸಭೆಯಲ್ಲಿ ಮಂಡಿಸಿದ್ದ ತ್ರಿವಳಿ ತಲಾಖ್ ಮಸೂದೆಗೆ 186 ಮತಗಳು ಪರವಾಗಿ ಬಿದ್ದಿದ್ದು, 74 ಮತಗಳು ವಿರೋಧವಾಗಿ ಚಲಾವಣೆಗೊಂಡಿವೆ ಎಂದು ಅವರು ತಿಳಿಸಿದ್ದಾರೆ.