ಬೆಂಗಳೂರು, ಜೂ. 17 (DaijiworldNews/AA): ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣ ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯ. ಅದಕ್ಕೆ ರಾಜೀನಾಮೆ ಕೇಳ್ತಿರೋದು ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಕ್ಕೂ ಆರ್ಸಿಬಿಗೂ ಏನು ಸಂಬಂಧ! ಅದು ಹೇಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡಿದ್ರು? ರಾಯಲ್ ಚಾಲೆಂಜರ್ಸ್ ಅಂದ್ರೆ ಏನು..!? ವಿಸ್ಕಿ ಪ್ರಚಾರಕ್ಕೆ ಅಂತಾ ಮಲ್ಯ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ವಿಸ್ಕಿ ಪ್ರಚಾರ ಮಾಡೋದಕ್ಕೆ ಕಾರ್ಯಕ್ರಮ ಮಾಡಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಸಿಬಿ ನಮ್ಮ ರಾಜ್ಯವನ್ನ ಪ್ರತಿನಿಧಿಸಿತ್ತಾ? ರಾಜ್ಯದ ಆಟಗಾರರು ಯಾರು ಇದ್ರು? ಮಾಲೀಕರು ಕರ್ನಾಟಕದವರು ಇದ್ರಾ? ಸರ್ಕಾರಕ್ಕೆ ಮಾಡೋದಕ್ಕೆ ಬೇರೆ ಏನೂ ಕೆಲಸ ಇರಲಿಲ್ಲವಾ? ರಾಜ್ಯದ ಮರ್ಯಾದೆ ಹರಾಜು ಹಾಕಿದ್ದಾರೆ. ಸರ್ಕಾರ ಅನುಮತಿ ಕೊಡದಿದ್ದರೆ ಅಭಿಮಾನಿಗಳು ಸ್ಟೇಡಿಯಂಗೆ ಬರ್ತಾ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಆರ್ಗನೈಸೈಡ್ ಕ್ರೈಂ ಬೇರೆ, ಆಕಸ್ಮಿಕ ಘಟನೆ ಬೇರೆ. ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿದ್ದು ಆರ್ಗನೈಸೈಡ್ ಕ್ರೈಂ. ಅಹಮದಾಬಾದ್ನಲ್ಲಿ ನಡೆದಿರುವುದು ಆಕಸ್ಮಿಕ ಘಟನೆ. ಬೇರೆ ರಾಜ್ಯಗಳಲ್ಲಿ ಆರ್ಗನೈಸೈಡ್ ಕ್ರೈಂ ನಡೆದಿದ್ರೆ, ಅಲ್ಲಿ ಹೋಗಿ ರಾಜೀನಾಮೆ ಕೇಳಲಿ ಎಂದು ಕಿಡಿಕಾರಿದರು.