ನವದೆಹಲಿ, ಜೂ22(Daijiworld News/SS): 200ಕ್ಕೂ ಹೆಚ್ಚು ಜನರನ್ನು ಹೊತ್ತಿದ್ದ ಕೇರಳದ ಹಡಗೊಂದು, ಜನವರಿ ತಿಂಗಳಿನಿಂದ ಕಾಣೆಯಾಗಿದೆ. ಆದರೆ ಕಾಣೆಯಾಗಿರುವ ಈ ಹಡಗಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
2019ರ ಜನವರಿಯಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ 243 ಪ್ರಯಾಣಿಕರಿದ್ದ ಕೇರಳದ ಹಡಗಿನ ಬಗ್ಗೆ ಸುಳಿವು ಸಿಗದ ಹಿನ್ನಲೆಯಲ್ಲಿ, ಶೋಧ ಕಾರ್ಯಕ್ಕೆ ಪೆಸಿಫಿಕ್ ಸಾಗರದ ಆಸುಪಾಸಿನ ಎಲ್ಲ ದೇಶಗಳಿಗೂ ಮನವಿ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಕೇರಳದ ಎರ್ನಾಕುಲಂನಿಂದ 'ದೇವ ಮಾತಾ 2' ಎಂಬ ಹೆಸರಿನ ಈ ಹಡಗು ಜನವರಿ 12, 2019 ರಂದು ಹೊರಟಿತ್ತು. ಇದರಲ್ಲಿ 243 ಜನರಿದ್ದರು. ಪೆಸಿಫಿಕ್ ಸಾಗರದ ಕಡೆಗೆ ಹೊರಟಿದ್ದ ಈ ಹಡಗು ಎಲ್ಲಿ ಹೋಗಿದೆ.?, ಪ್ರಯಾಣಿಕರು ಏನಾದರು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.
ನಿಗೂಢವಾಗಿ ಕಣ್ಮರೆಯಾಗಿರುವ ಈ ಹಡಗಿನ ಬಗ್ಗೆ ವಿಚಾರಿಸಿದಾಗ, ಪ್ರಯಾಣಿಕರು ಪೆಸಿಫಿಕ್ ಸಾಗರದ ಕಡೆಗೆ ತೆರಳುತ್ತಿರುವುದಾಗಿ ತಿಳಿಸಿದ್ದರು. ಆದರೆ ಏಕೆ ಅಲ್ಲಿಗೆ ಹೋದರು ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ.
ಕೇರಳದಿಂದ ಕಾಣೆಯಾಗಿರುವ ಹಡಗಿನಲ್ಲಿ ಜನರನ್ನು ಕಳ್ಳಸಾಗಾಟ ನಡೆಸಲಾಗುತ್ತಿತ್ತು ಎನ್ನಲಾಗಿದೆ. 243 ಪ್ರಯಾಣಿಕರಲ್ಲಿ ಶ್ರೀಲಂಕಾ, ತಮಿಳುನಾಡು ಹಾಗೂ ವಿವಿಧ ಭಾಗದ ಬಡ ಕಾರ್ವಿುಕರು, ಮಹಿಳೆಯರು ಮತ್ತು ಮಕ್ಕಳೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.