ನವದೆಹಲಿ, ಜೂ22(Daijiworld News/SS): ನಿರಂತರವಾಗಿ ದೇಶದಲ್ಲಿ ಹಿಂಸಾತ್ಮಕ ಚಟುವಟಿಕಗಳನ್ನು ನಡೆಸುತ್ತಿರುವ ಭಯೋತ್ಪಾದನಾ ಸಂಘಟನೆಗಳನ್ನು ಮಟ್ಟ ಹಾಕಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಕಾರ್ಯಪಡೆಯಿಂದ (ಎಫ್ಎಟಿಎಫ್) ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಲಾಗಿದೆ.
ಹಫೀಜ್ ಸಯೀದ್, ಮೌಲಾ ಮಸೂದ್ ಅಜರ್ ಮತ್ತು ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಇತರೆ ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಪಾಕಿಸ್ತಾನದ ನೆಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಸಕ್ರಿಯವಾಗಿದ್ದು, ಅದನ್ನು ತಡೆಯುವ ಕಾರ್ಯ ನಡೆಯುತ್ತಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆ ನಿಗದಿಪಡಿಸಿದ ಗುಣಮಟ್ಟದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಭಾರತ ಹಾಗೂ ಇತರೆ ದೇಶಗಳು ಆರೋಪಿಸಿದ್ದವು.
ಈ ಹಿನ್ನಲೆಯಲ್ಲಿ, ವಿಶ್ವಸಂಸ್ಥೆ ಪಟ್ಟಿಮಾಡಿರುವ ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದರೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಎಫ್ಎಟಿಎಫ್ ಎಚ್ಚರಿಕೆ ನೀಡಿದೆ.
ಪಾಕಿಸ್ತಾನವನ್ನು ಈಗಾಗಲೇ 'ಬೂದು ಪಟ್ಟಿ'ಗೆ ಸೇರಿಸಲಾಗಿದೆ. ಅಕ್ರಮ ಹಣವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಪಾಕಿಸ್ತಾನದ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಒಂದು ವೇಳೆ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿದರೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಯಾವುದೇ ಜಾಗತಿಕ ಸಂಸ್ಥೆಗಳು ಹಾಗೂ ದೇಶಗಳಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳದ ಸ್ಥಿತಿಗೆ ಪಾಕ್ ತಲುಪುತ್ತದೆ. ಮಾತ್ರವಲ್ಲ, ಪಾಕ್ ದೇಶವು ಜಾಗತಿಕ ನಿರ್ಬಂಧನೆಗೆ ಒಳಪಡಬೇಕಾಗುತ್ತದೆ.