ಮುಂಬೈ, ಜೂ 22 (Daijiworld News/MSP): ಇಲ್ಲಿನ ಮಜಗಾಂವ್ ಹಡಗು ಬಂದರಿನಲ್ಲಿ ಬೆಂಕಿ ದುರಂತ ಸಂಭವಿಸಿ ಓರ್ವ ಮೃತಪಟ್ಟು , ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಐಎನ್ಎಸ್ ವಿಶಾಖಪಟ್ಟಣಂ ಸೇನಾ ನೌಕೆಯಲ್ಲಿ ಶುಕ್ರವಾರ ಸಂಜೆ ಸುಮಾರು 5:44 ವೇಳೆಗೆ ಬೆಂಕಿ ದುರಂತ ನಡೆದಿದೆ.
ಮೃತಪಟ್ಟವನನ್ನು ಗುತ್ತಿಗೆ ಕಾರ್ಮಿಕ 23 ವರ್ಷದ ಬಜೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಇತನನ್ನು ಸ್ಥಳೀಯ ಜೆಜೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದಾರೆ. ಇತ ಹಡಗು ನಿರ್ಮಾಣದ ಕೆಲಸದಲ್ಲಿ ತೊಡಗಿಕೊಂಡಿದ್ದ. ಮಜಾಗನ್ ಡಾಕ್ ಶಿಪ್ ಬಿಲ್ಡರ್ಸ್ ಪ್ರಕಟಣೆಯಲ್ಲಿ ತಿಳಿಸಿರುವಂತೆ ದಕ್ಷಿಣ ಮುಂಬೈನ 12704 ಸಂಖ್ಯೆಯ ಡಾಕ್ ಯಾರ್ಡ್ನಲ್ಲಿ ಸಂಜೆ 4 ಗಂಟೆಗೆ "ಸಣ್ಣ ಬೆಂಕಿ" ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರೊಬ್ಬರು ಉಸಿರುಕಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕನಿಗೆ "ಸಣ್ಣ ಸುಟ್ಟ" ಗಾಯಗಳಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಐಎನ್ಎಸ್ ವಿಶಾಖಪಟ್ಟಣಂ ಭಾರತದ ನೌಕಾ ದಳದ ಹಡಗು ಕ್ಷಿಪಣಿ ಉಡಾವಣೆಗಾಗಿ ಬಳಸಲಾಗುತ್ತದೆ. ಅಗ್ನಿಶಾಮಕ ದಳಕ್ಕೆ ತಂಡ ಆಗಮಿಸಿ ಬೆಂಕಿ ನಂದಿಸಿದೆ. ಸಂಜೆ 7 ರ ಹೊತ್ತಿಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಮೂಲಗಳು ಹೇಳಿದೆ.