ಯಾದಗಿರಿ, ಜೂ 22 (Daijiworld News/MSP): ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಹೆರೂರು ಬಿ ಗ್ರಾಮದಲ್ಲಿ ನಡೆಯಬೇಕಾಗಿದ್ದ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಕೊನೆ ಘಳಿಗೆಯಲ್ಲಿ ರದ್ದಾಗಿದೆ.
ಮುಖ್ಯಮಂತ್ರಿಗಳ 2ನೇ ದಿನದ ಗ್ರಾಮವಾಸ್ತವ್ಯ ಹೇರೂರು ಬಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆದರೆ ರಾತ್ರಿಯಿಡೀ ಹೆರೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಈ ಕಾರಣದಿಂದ ಜನತಾದರ್ಶನಕ್ಕಾಗಿ ಹಾಕಿದ್ದ ಪೆಂಡಾಲ್ ಸಂಪೂರ್ಣ ಹಾಳಾಗಿದೆ. ಮಳೆ ಮುಂದುವರಿಯುವ ಸೂಚನೆ ಸಿಕ್ಕಿದ್ದರಿಂದ ಜಿಲ್ಲಾಡಳಿತ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವನ್ನು ಮುಂದೂಡಿದೆ.
ರದ್ದಾಗಿರುವ ಹೆರೂರು ಗ್ರಾಮದ ವಾಸ್ತವ್ಯದ ದಿನಾಂಕವನ್ನು ಮುಖ್ಯಮಂತ್ರಿಗಳೇ ನಿಗದಿಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಗ್ರಾಮವಾಸ್ತವ್ಯ ಧಿಡೀರ್ ರದ್ದಾಗಿರುವುದರಿಂದ ಕಲಬುರ್ಗಿಯ ಹೇರೂರು ಗ್ರಾಮಸ್ಥರಿಗೆ ನಿರಾಸೆಯಾಗಿದೆ.
ಇನ್ನು ಯಾದಿಗಿರಿಯ ಚಂಡರಕಿಯಲ್ಲಿರುವ ಮುಖ್ಯಮಂತ್ರಿಗಳು 8 ಗಂಟೆ ಸುಮಾರಿಗೆ ಹೈದರಾಬಾದ್ಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಚಂಡರಕಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರಕಿತ್ತು. ಜನರ ಅಹವಾಲುಗಳನ್ನು ಆಲಿಸಿದ ನಂತರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳೊಡನೆ ಊಟ ಮಾಡಿ ಶಾಲಾ ಕೊಠಡಿಯಲ್ಲೇ ನಿದ್ರೆಗೆ ಜಾರಿದ್ದರು.