ಹುಬ್ಬಳ್ಳಿ, ಜೂ 22 (Daijiworld News/MSP): "ನಾಮಕಾವಾಸ್ತೆ ರಾಜ್ಯದಲ್ಲಿ ಇರುವ ಸರ್ಕಾರದಿಂದ ಅಭಿವೃದ್ಧಿ ನಿಂತ ನೀರಾಗಿದೆ, ಜನರ ಸಂಕಷ್ಟಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ರೀತಿಯ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುವುದಕ್ಕಿಂತ ಬೇಗ ಬಿದ್ದು ಹೋದರೆ ಒಳ್ಳೆಯದು" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ಹೆಸರಿಗೆ ಮಾತ್ರ ಸರ್ಕಾರವಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮೈತ್ರಿ ಸರ್ಕಾರದ ಒಳ ಜಗಳವೇ ದೊಡ್ಡದಾಗಿದ್ದು, ಜನರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇನ್ನೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಒಬ್ಬರಿಗೊಬ್ಬರು ದೋಷಾರೋಪದಲ್ಲೇ ಕಾಲಕಳೆಯುವಂತಾಗಿದೆ" ಎಂದು ಆರೋಪಿಸಿದರು.
" ಬಿಜೆಪಿ ಪರ ಮತದಾರ ನೀಡಿರುವ ತೀರ್ಪನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಲು ತಯಾರಿಲ್ಲ. ಅಧಿಕಾರದ ದುರಾಸೆಯಿಂದ ಕಾಂಗ್ರೆಸ್ - ಜೆಡಿಎಸ್ ಅಪವಿತ್ರ ಮೈತ್ರಿ ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿದಿದೆ. ಹೀಗಾಗಿ, ಈ ಸರ್ಕಾರಕ್ಕೆ ದೀರ್ಘಾಯುಷ್ಯವಿಲ್ಲ. ಶೀಘ್ರದಲ್ಲಿ ಈ ಮೈತ್ರಿ ಸರ್ಕಾರ ಪತನವಾಗಲಿದೆ. ಸರ್ಕಾರ ಉರುಳಿದ ನಂತರ ಬಿಜೆಪಿ ಸೂಕ್ತ ನಿರ್ಧಾರಕ್ಕೆ ಬರಲಿದೆ ” ಎಂದಿದ್ದಾರೆ.