ಚಿಕ್ಕಬಳ್ಳಾಪುರ, ಜೂ22(Daijiworld News/SS): ಒಂದು ವೇಳೆ ಈ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳದೆ ಇರುತ್ತಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ 15 - 16 ಸ್ಥಾನ ಗೆಲುವು ಸಾಧಿಸುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರವು ಜನರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳಬಾರದಿತ್ತು. ಚುನಾವಣೆಯಲ್ಲಿ ನಾನು ಸೋತರೂ ಪರವಾಗಿಲ್ಲ, ಆದರೆ ಚಿಕ್ಕಬಳ್ಳಾಪುರದ ಜನರ ಮೇಲೆ ಇಟ್ಟಿರುವಂತಹ ಪ್ರೀತಿ ವಿಶ್ವಾಸವನ್ನು ಮುಂದುವರಿಸುತ್ತೇನೆ. ಮುಂದೆ ನಡೆಯುವ ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೂ ಕ್ಷೇತ್ರದ ಜನರೊಂದಿಗೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ಸರ್ಕಾರ ಉಳಿಸಿಕೊಳ್ಳಲು ಹರಸಾಹನ ಪಡುವುದರ ಬದಲು ಪಕ್ಷ ಸಂಘಟನೆ ಮಾಡಬೇಕು. ಲೋಕಸಭೆ ಚುನಾವಣೆ ನಂತರ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಂಡಿಲ್ಲ. ಸಮ್ಮಿಶ್ರ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದೇ ಇರುವುದೇ ನಾವು ಸೋಲಲು ಪ್ರಮುಖ ಕಾರಣ ಎಂದು ತಿಳಿಸಿದರು.
ಚುನಾವಣೆಯಲ್ಲಿ ನಮ್ಮವರಿಂದಲೂ ಮೋಸ ಆಯಿತು. ಅಧಿಕಾರ ಪಡೆಯುವ ಆಸೆಯಿಂದ ಮೋಸ ಮಾಡಿದ್ದಾರೆ. ಒಂದು ವೇಳೆ ಈ ಬಾರಿ ರಾಜ್ಯದಲ್ಲಿ ಮೈತ್ರಿ ಇಲ್ಲದೆ ಇದ್ದಿದ್ದರೆ 15 ರಿಂದ 16 ಸ್ಥಾನ ಖಂಡಿತಾ ಗೆಲ್ಲುತ್ತಿದ್ದೆವು. ಚಿಕ್ಕಬಳ್ಳಾಪುರದಲ್ಲಿ ನನ್ನ ಸೋಲಿಗೆ ನೂರಕ್ಕೆ ನೂರರಷ್ಟು ಮೈತ್ರಿಯೇ ಕಾರಣ ಎಂದು ಹೇಳಿದರು.
ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡರು ಇಂದು ಒಂದು ಹೇಳಿಕೆ ಕೊಡುತ್ತಾರೆ. ನಾಳೆ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ಕೊಡುತ್ತಾರೆ. ಆದರೆ, ನಾನು ದೇವೇಗೌಡರ ರೀತಿ ಹೇಳಿಕೆ ಕೊಡುವುದಿಲ್ಲ. ನಾನು ಕೊಟ್ಟ ಹೇಳಿಕೆಯನ್ನು ವಾಪಸ್ ಪಡೆಯುವುದಿಲ್ಲ. ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದು ಮೊಯ್ಲಿ ಹೇಳಿದರು.