ನವದೆಹಲಿ, ಜೂ 22 (Daijiworld News/MSP): ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯ ಫೋಟೋ ಬಗ್ಗೆ ಚುಡಾಯಿಸಿದ ಆಕೆಯ ಸಹಪಾಠಿಗೆ ಖಡಕ್ ಉತ್ತರ ನೀಡಿದ್ದಾರೆ. ಸ್ಮೃತಿ ಇರಾನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಮಗಳ ಫೋಟೋ ಒಂದನ್ನು ಪೋಸ್ಟ್ ಮಾಡಿ ಬಳಿಕ ಅದನ್ನು ಡಿಲೀಟ್ ಮಾಡಿದ್ದರು.
ಆದರೆ ಆ ಫೋಟೋ ನೋಡಿದ ಆಕೆಯ ಸಹಪಾಠಿಯೊಬ್ಬ ಆಕೆಯನ್ನು ಟೀಕಿಸಿ, ಚುಡಾಯಿಸಿದ್ದ. ಮಾತ್ರವಲ್ಲದೆ ನೀನು ಸುಂದರವಾಗಿ ಕಾಣುತ್ತಿಲ್ಲ ಎಂದು ತನ್ನ ಇತರ ಸ್ನೇಹಿತರೊಂದಿಗೆ ಸೇರಿ ಕಿಚಾಯಿಸಿದ್ದ. ಇದರಿಂದ ನೊಂದುಕೊಂಡಿದ್ದ ಸ್ಮೃತಿ ಇರಾನಿ ಪುತ್ರಿ, ತನ್ನ ತಾಯಿ ಬಳಿ ಚಿತ್ರವನ್ನು ನೋಡಿ ಆಡಿಕೊಂಡು ನಗುತ್ತಾರೆ ಎಂದು ಬೇಸರಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಸ್ಮೃತಿ ಇರಾನಿ ಪುತ್ರಿ ಫೋಟೋ ಡಿಲೀಟ್ ಮಾಡಿದ್ದರು.
ಆದರೆ ಇದೀಗ ಮತ್ತೊಮ್ಮೆ ಅದೇ ಫೋಟೋ ಮತ್ತೆ ಪ್ರಕಟಿಸಿದ ಸ್ಮತಿ ಇರಾನಿ ಈ ರೀತಿ ಬರೆದುಕೊಂಡಿದ್ದಾರೆ. "ಮಿ.ಜಾ, ನನ್ನ ಪುತ್ರಿ ಒಬ್ಬ ಕ್ರೀಡಾಪಟು. ಮಾತ್ರವಲ್ಲದೆ ಲಿಮ್ಕಾ ಬುಕ್ ನಲ್ಲಿ ದಾಖಲೆ ಬರೆದಿದ್ದಾಳೆ. ಜೊತೆಗೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ಎರಡು ಬಾರಿ ವಿಶ್ವ ಚಾಂಪಿಯನ್ ನಲ್ಲಿ ಕಂಚಿನ ಪದಕ ಜಯಿಸಿದ್ದಾಳೆ. ವಿಶ್ವ ಚಾಂಪಿಯನ್ ಆಗಲು ಸಿದ್ಧತೆ ನಡೆಸಿದ್ದಾಳೆ. ಆಕೆ ನನ್ನ ಮುದ್ದಿನ ಪುತ್ರಿಯಾಗಿದ್ದು, ಸುಂದರವಾಗಿದ್ದಾಳೆ. ನೀನು ಎಷ್ಟು ಬಾರಿಯಾದರೂ ಚುಡಾಯಿಸಬಹುದು. ಆಕೆ ಝೋಯಿಶ್ ಇರಾನಿ. ನಾನು ಆಕೆಯ ಅಮ್ಮ ಆಗಿರುವುದಕ್ಕೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
ಇದರೊಂದಿಗೆ " ನಾನು ಫೋಟೋ ಡಿಲೀಟ್ ಮಾದಿದ್ದರಿಂದ ಹೀಗೆ ಚುಡಾಯಿಸುವವರಿಗೆ ಹೆದರಿದ ಹಾಗೆ ಆಗುತ್ತದೆ ಹಾಗೂ ಫೋಟೋ ಡಿಲೀಟ್ ಮಾಡಿದಕ್ಕೆ ಆತ ಮತ್ತಷ್ಟು ಗೇಲಿ ಮಾಡುವ ಸಾಧ್ಯತೆ ಇದೆ ಆದ್ದರಿಂದ ಮತ್ತೆ ಪೋಸ್ಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಆಕರ್ಷಿಸಿದೆ.