ಬೆಂಗಳೂರು, ಜೂ 22 (Daijiworld News/MSP): ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಶ್ರೀರಾಮುಲು, ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ತಮ್ಮನ್ನು ಶಕುನಿ ಎಂದು ಕರೆದಿದ್ದ ಸಚಿವ ಡಿ.ಕೆ ಶಿವಕುಮಾರ್ ವಿರುದ್ದ ಶ್ರೀರಾಮು ಕಿಡಿಕಾರಿದ್ದು, ಶೀಘ್ರದಲ್ಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ. ಮೈತ್ರಿ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಶಕುನಿ ಇದ್ದಂತೆ. ಯುದ್ದ ಮುಗಿದ ಮೇಲೆ ನಿಜವಾದ ಶಕುನಿ ಯಾರೆಂದು? ಗೊತ್ತಾಗಲಿದೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶ್ರೀರಾಮುಲು, " ಮಹಾಭಾರತ ನಡೆದ ಸಮಯದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿ ಶಕುನಿ ಆಟಕ್ಕೆ ಹೇಗೆ ಕೌರವರು ಬಲಿಯಾದರು? ಎಂಬುದು ತಿಳಿದಿದ್ದೇವೆ. ಅಂತೆಯೇ ಸಚಿವ ಡಿ.ಕೆ ಶಿವಕುಮಾರ್ ಶಕುನಿ ಆಟಕ್ಕೆ ಮೈತ್ರಿ ಸರ್ಕಾರ ಬಲಿಯಾಗಲಿದೆ. ಶೀಘ್ರದಲ್ಲೇ ಡಿ.ಕೆ.ಶಿ ಅವರ ನಿಜವಾದ ಬಣ್ಣ ಬಯಲಾಗಲಿದೆ " ಎಂದರು.
" ಇನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ಶ್ರೀರಾಮುಲುವನ್ನು ನಿಯಂತ್ರಿಸುತ್ತೇನೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದರು. ಆದರೆ ಅಲ್ಲಿನ ಮಾಜಿ-ಹಾಲಿ ಶಾಸಕರು ಮತ್ತು ಮಂತ್ರಿಗಳು ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಎಷ್ಟೇ ಪ್ರಯತ್ನಿಸಿದರೂ ಫಲಿತಾಂಶ ಬಂದಾಗ ಸೋತು ಸುಣ್ಣವಾದರು. ಈಗ ಚುನಾವಣೆಯಲ್ಲಿ ಸೋತ ಮೇಲೆ ಸಚಿವ ಡಿ.ಕೆ ಶಿವಕುಮಾರ್ ಬಿಡಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೇ ಇತ್ತ ಮುಖ ಹಾಕುತ್ತಿಲ್ಲ" ಎಂದು ಮಾತಿನೇಟು ನೀಡಿದರು.
"ಪ್ರಚಾರದ ಹುಚ್ಚಿನಿಂದ ಡಿಕೆಶಿ ಈ ರೀತಿ ವರ್ತಿಸುತ್ತಿದ್ದು, ಯುದ್ಧಮುಗಿದ ಮೇಲೆಯೆ ಶಕುನಿ ನೈಜ ಆಟ ಬಯಲಾಗಲಿದೆ" ಎಂದರು.