ಬೆಂಗಳೂರು, ಜೂ 22 (Daijiworld News/SM): ರಾಜ್ಯದಲ್ಲಿ ಆಡಳಿತದಲ್ಲಿರುವ ಸಮ್ಮಿಶ್ರ ಸರಕಾರವನ್ನು ಜನರು ತಿರಸ್ಕರಿಸಿದ್ದಾರೆ. ದೋಸ್ತಿ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ದೊಡ್ಡ ಗೌಡರ ಮಾತು ಕೇಳಿಕೊಂಡು ಸಿಎಂ ಕುಮಾರಸ್ವಾಮಿ ರಾಜಕೀಯ ಡೊಂಬರಾಟ ನಡೆಸುತ್ತಿದ್ದು, ಜನರ ಗಮನ ಬೇರೆಡೆ ಸೆಳೆಯಲು ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ 42 ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅಲ್ಲಿಯ ಪ್ರಗತಿ ಪರಿಶೀಲಿಸಿ ಒಂದು ಪುಸ್ತಕ ಹೊರ ತರುತ್ತಿದ್ದೇವೆ. ಆ ಗ್ರಾಮದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂಬುವುದರ ಪುಸ್ತಕದ ಮೂಲಕ ಬಹಿರಂಗಗೊಳ್ಳಲಿದೆ ಎಂದರು.
ಹಳ್ಳಿಯ ಅಭಿವೃದ್ಧಿಗೆ ಹಾಗೂ ಅಲ್ಲಿನ ಜನತೆಗೆ ಒಂದು ಕೋಟಿ ನೀಡುತ್ತೇವೆ ಎನ್ನುವ ಸುಳ್ಳು ಅಶ್ವಾಸನೆ ನೀಡಿದ್ದಾರೆ. ಹಳ್ಳಿಗೆ 1 ಕೋಟಿ ಕೊಡುತ್ತೇವೆ ಎಂದಿದ್ದಾರೆ. ಆದರೆ ಇದುವರೆಗೂ ಯಾವುದೇ ಹಣ ಬಿಡುಗಡೆಗೊಂಡಿಲ್ಲ ಎಂದು ಆರೋಪಿಸಿದರು. ಸಿಎಂ ಕುಮಾರಸ್ವಾಮಿ ಅಧಿಕಾರ ನಡೆಸುವ ಬದಲು, ಖುರ್ಚಿ ಉಳಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಬಿಎಸ್ ವೈ ಆರೋಪಿಸಿದ್ದಾರೆ.