ಬೆಂಗಳೂರು, ಜೂ 22 (Daijiworld News/SM): ಜೆಡಿಎಸ್ ವರುಷ್ಠ ದೇವೇಗೌಡ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ವಿರುದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ವಿಶ್ವನಾಥ್ ಗರಂ ಆಗಿದ್ದಾರೆ.
ಲೋಕಸಭೆ ಚುನಾವಣೆ ಸೋಲು ಸೇರಿದಂತೆ ಹಿನ್ನಡೆಯ ವಿಚಾರಗಳಿಗೆ ಜೆಡಿಎಸ್ ಕಾರಣ ಎಂಬುವುದಾಗಿ ಆರೋಪಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿರುವ ಮೈತ್ರಿ ಸರಕಾರದಲ್ಲಿ ಹೆಚ್ಚಿನ ಪಾಲು ಹೊಂದಿರುವುದು ಕಾಂಗ್ರೆಸ್ ಪಕ್ಷ. ಸಚಿವ ಸ್ಥಾನ ಹೆಚ್ಚಿರುವುದು ಕಾಂಗ್ರೆಸ್ ಕೈಯಲ್ಲಿ. ಆದರೂ ಕೂಡ ಕಾಂಗ್ರೆಸ್ ವಿರುದ್ಧವೇ ಮಾತನಾಡುತ್ತಿದ್ದಾರೆ. ಕಾಂಗ್ರೆಸಿಗರಿಗೆ ಅಷ್ಟೊಂದು ಕಷ್ಟವಾಗುತ್ತಿದೆಯೇ ಆದಲ್ಲಿ ಮೈತ್ರಿ ಹಿಂಪಡೆದು ಹೋಗಲಿ ಎಂದು ವಿಶ್ವನಾಥ್ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಬಹುದು ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಅಭಿಪ್ರಾಯವನ್ನು ಟೀಕಿಸಿದ ವೀರಪ್ಪ ಮೊಯ್ಲಿ ಅವರು, ದೇವೇಗೌಡರು ಹೇಗೆ ಬೇಕಾದರೂ ಬದಲಾಗುತ್ತಾರೆ ಎಂದಿದ್ದರು. ಇದಕ್ಕೆ ಉತ್ತರಿಸಿರುವ ವಿಶ್ವನಾಥ್, ದೇವೇಗೌಡರಿಗೆ ಸಮಯ ಸಂದರ್ಭ ತಿಳಿದಿದೆ. ಅದನ್ನು ಅರಿತುಕೊಂಡು ಅವರು ಮಾತನಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.