ಶಾಪಿಯಾನ್, ಜೂ23(Daijiworld News/SS): ಜಮ್ಮು ಮತ್ತು ಕಾಶ್ಮೀರದ ಶಾಪಿಯಾನ್ನಲ್ಲಿ ಮುಂಜಾನೆ ವೇಳೆ ನಡೆದ ಭಾರತೀಯ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ದಾಳಿ ನಡೆದಿತ್ತು ಎಂದು ಎಎನ್ಐ ವರದಿ ಮಾಡಿದೆ. ಬೃಹತ್ ಶಸ್ತ್ರಾಸ್ತ್ರವುಳ್ಳ ಉಗ್ರರು ದಾಳಿಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ.
ಶಾಪಿಯಾನ್ನಲ್ಲಿ ಇನ್ನಷ್ಟು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಆ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಗುಂಡಿನ ಚಕಮಕಿಯಲ್ಲಿ ಮೃತರಾಗಿರುವ ಭಯೋತ್ಪಾದಕರು ಯಾವ ಸಂಘಟನೆಗೆ ಸೇರಿದವರು ಎಂದು ಇನ್ನೂ ತಿಳಿದುಬಂದಿಲ್ಲ. ಹತರಾದವರಿಬ್ಬರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಜೂ. 22ರಂದು ಬರಾಮುಲ್ಲಾದಲ್ಲಿಯೂ ಭಾರತೀಯ ಸೇನೆ ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಸದೆಬಡಿಯಲಾಗಿತ್ತು.