ಬೆಂಗಳೂರು, ಜೂ23(Daijiworld News/SS): ನಾನೊಬ್ಬ ಗೌಡ ಎಂದು ಹೇಳಿಕೊಳ್ಳಲು ನನಗೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ನನ್ನ ಹೆಸರಿನೊಂದಿಗೆ ಗೌಡ ಎಂದು ಸೇರಿಸಿಕೊಂಡಿದ್ದಕ್ಕೆ ನಾನು ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವನಾಗಿದ್ದೇನೆ. ಅದನ್ನು ಹೇಳಲು ನನಗೆ ಹಿಂಜರಿಕೆ, ನಾಚಿಕೆ ಇಲ್ಲ. 'ಗೌಡ'ಎಂಬ ಹೆಸರು ಇದ್ದಿದ್ದಕ್ಕೆ ನನಗೆ ಮುಖ್ಯಮಂತ್ರಿ ಪದವಿ ಹಾಗೂ ಕೇಂದ್ರ ಮಂತ್ರಿ ಸ್ಥಾನ ಸಿಕ್ಕಿತ್ತು ಎಂದು ಹೇಳಿದ್ದಾರೆ.
ನಾನು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹೆಸರು ಕೇವಲ ಡಿ.ವಿ.ಸದಾನಂದ ಎಂದಿತ್ತು. ಆಗ ಸೋತಿದ್ದೆ. ಬಳಿಕ ಹೆಸರಿನ ಜತೆಗೆ 'ಗೌಡ' ಎಂದು ಸೇರಿಕೊಳ್ಳಲು ಕೆಲವರು ಸಲಹೆ ನೀಡಿದಾಗ ಡಿ.ವಿ.ಸದಾನಂದ ಗೌಡ ಎಂದು ಬದಲಾಯಿತು. ಆ ನಂತರದ ಚುನಾವಣೆಯಲ್ಲಿ ಗೆಲವು ಸಾಧಿಸಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಸಮುದಾಯದ ಹೆಸರು ಕಾರಣವಾಗಿದೆ. ಹೀಗಾಗಿ ನಾನೊಬ್ಬ ಗೌಡ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದ್ದಾರೆ.
ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಹಾಗೂ ಕೃಷಿಕ ಸಾಹಿತ್ಯಪರಿಷತ್ತು ಬೆಂಗಳೂರಿನ ಕನ್ನಡ ಸಾಹಿತ್ಯಪರಿಷತ್ತಿನಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ’ ಹಾಗೂ ‘ಕೆಂಪೇಗೌಡರ ಯಲಹಂಕ ಸಂಸ್ಥಾನದ ಇತಿಹಾಸ ಮತ್ತು ಐತಿಹ್ಯದ ಬಗ್ಗೆ ವಿಚಾರ ಸಂಕಿರಣ’ ಸಮಾರಂಭದಲ್ಲಿ ಅವರು ಮಾತನಾಡಿದರು.