ಬೆಂಗಳೂರು, ಜೂ23(Daijiworld News/SS): ಜೀವನದಲ್ಲಿ ಮೇಲೆ ಬರಲು ಹಣವೊಂದೇ ಮುಖ್ಯವಲ್ಲ, ಕೇವಲ ಹಣ ಮಾತ್ರ ಮುಖ್ಯ ಎಂದರೆ ಅದು ತಪ್ಪಾಗುತ್ತದೆ ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಮೇಲೆ ಬರಲು ಹಣವೊಂದೇ ಮುಖ್ಯ ಎಂದರೆ ಅದು ತಪ್ಪಾಗುತ್ತದೆ. ಕಲಿಯುವ ಛಲವಿರಬೇಕು. ಕಲಿಯಬೇಕು ಎನ್ನುವ ಛಲವಿದ್ದಾಗ, ವಿದ್ಯೆ ತಲೆಗೆ ಹತ್ತುತ್ತದೆ ಎಂದು ಹೇಳಿದರು.
ಕಾಲೇಜಿಗೆ ಬರುವವರೆಗೂ ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಆಗ, ನನ್ನ ತಾಯಿ ಹೇಳಿದಂತೆ ನಡೆದೆ. ಮುಂದೆ ಇಂಗ್ಲಿಷ್ ವಿಷಯದಲ್ಲಿಯೇ ಮೊದಲ ರ್ಯಾಂಕ್ ಪಡೆದೆ. ಛಲವಿದ್ದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ದೇಶ ಒಂದು ಕಡೆ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಇನ್ನೊಂದೆಡೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದೆ, ಇದೊಂದು ಆತಂಕಕಾರಿ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಸ್ವಾಮಿ ವಿವೇಕಾನಂದರ ತತ್ವವನ್ನು ಮೈಗೂಡಿಸಿಕೊಳ್ಳಬೇಕಿದೆ. ಉತ್ತಮ ಶಿಕ್ಷಣದಿಂದಾಗಿ, ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯ ರೆಡ್ಡಿ, ಉದಯ್ ಗರುಡಾಚಾರ್, ತಾರಾ, ಬಿ ವೈ ವಿಜಯೇಂದ್ರ, ರಕ್ಷಾ ಫೌಂಡೇಶನ್ ಸಂಸ್ಥಾಪಕ ಸಿ ಕೆ ರಾಮಮೂರ್ತಿ, ನಟಿ ಅಮೂಲ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.