ನವದೆಹಲಿ, ಜೂ23(Daijiworld News/SS): ಮೋದಿ ನೇತ್ರತ್ವದ ಬಿಜೆಪಿ ಸರಕಾರ ಮೊದಲನೇ ಅವಧಿಯಲ್ಲೂ ಭ್ರಷ್ಟಾಚಾರದ ವಿರುದ್ಧ ಕೆಲ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಇದೀಗ ಎರಡನೇ ಅವಧಿಯಲ್ಲಿ ಅದನ್ನು ಇನ್ನೊಂದು ಹಂತಕ್ಕೆ ವಿಸ್ತರಿಸಿದ್ದಾರೆ. ಅಕ್ರಮ ಆಸ್ತಿ ಸಂಗ್ರಹಿಸಿದ ಮತ್ತು ಕಪ್ಪು ಹಣ ಹೊಂದಿರುವ ಖಾಸಗಿ ವ್ಯಕ್ತಿಗಳ ವಿರುದ್ಧವೂ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಈಗಾಗಲೇ ಓರ್ವ ಜಂಟಿ ಆಯುಕ್ತ ದರ್ಜೆಯ ಅಧಿಕಾರಿ ಸೇರಿದಂತೆ 12 ಹಿರಿಯ ತೆರಿಗೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ವಜಾ ಮಾಡಿದೆ. ನಂತರ ಭ್ರಷ್ಟಾಚಾರ ಆರೋಪ ಹೊತ್ತ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಇಲಾಖೆಯ 15 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿದೆ. ವಜಾಗೊಂಡವರಲ್ಲಿ ಪ್ರಧಾನ ಆಯುಕ್ತರಿಂದ ಹಿಡಿದು ಸಹಾಯಕ ಆಯುಕ್ತರವರೆಗೆ ವಿವಿಧ ಸ್ತರದ ಅಧಿಕಾರಿಗಳು ಇದ್ದಾರೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತದಲ್ಲಿ ಕೆಂಪು ಪಟ್ಟಿ ಧೋರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಮತ್ತೊಂದು ಸುತ್ತಿನ ಸಮರ ಸಾರಿದೆ. ಎಲ್ಲ ಸಚಿವಾಲಯಗಳಲ್ಲಿ ನಿಯಮಿತವಾಗಿ ಎಲ್ಲ ಅಧಿಕಾರಿಗಳ ಮೌಲ್ಯಮಾಪನ ನಡೆಸುವಂತೆ ಸಿಬ್ಬಂದಿ ಸಚಿವಾಲಯ ಸುತ್ತೋಲೆ ಕಳುಹಿಸಿದೆ ಎಂದು ತಿಳಿದುಬಂದಿದೆ.
ಈ ಸುತ್ತೋಲೆಯನ್ನು ಲಂಚದ ಆರೋಪಗಳಲ್ಲಿ 15 ಮಂದಿ ತೆರಿಗೆ ಅಧಿಕಾರಿಗಳನ್ನು ಕಡ್ಡಾಯವಾಗಿ ಮನೆಗೆ ಕಳುಹಿಸಿದ ಕೆಲವೇ ದಿನಗಳ ಬಳಿಕ ಪ್ರಕಟಿಸಲಾಗಿದೆ. ಲಂಚ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದವಿರುವ ಎಲ್ಲ ಕ್ಷೇತ್ರಗಳಲ್ಲೂ ತೀವ್ರ ನಿಗಾ ಇರಿಸಲಾಗುತ್ತಿದ್ದು, ತಪ್ಪಿತಸ್ಥರನ್ನು ಮತ್ತು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರನ್ನು ಮುಲಾಜಿಲ್ಲದೆ ದಂಡಿಸುವ ನೀತಿ ಅನುಸರಿಸಲಾಗುತ್ತದೆ ಎನ್ನಲಾಗಿದೆ.
ಈಗಾಗಲೇ ಎಲ್ಲ ಕೇಂದ್ರ ಸರಕಾರಿ ನೌಕರರ ನಿಯಮಿತ ಮೌಲ್ಯಮಾಪನ ನಡೆಸುವಂತೆ ಸಚಿವಾಲಯಗಳಿಗೆ ಸೂಚಿಸಲಾಗಿದೆ. ಅಲ್ಲದೆ ಪ್ರತಿ ತಿಂಗಳ 15ನೇ ತಾರೀಕಿನೊಳಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸರಕಾರಿ ಅಧಿಕಾರಿಗಳ ಮೌಲ್ಯಮಾಪನ ಜುಲೈ 15ರಿಂದ ಆರಂಭವಾಗಲಿದೆ ಎಂದು ತಿಳಿದುಬಂದಿದೆ.