ಬೆಂಗಳೂರು,ಜು. 04 (DaijiworldNews/AK): ಮುಖ್ಯಮಂತ್ರಿಯವರು ದೇಶದ ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಕೆಲಸ ಮಾಡುತ್ತಿರುವುದು ಖಂಡನೀಯ; ಅವರು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಗ್ರಹಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಸ್ಥಿತಿಯನ್ನು ನೋಡಿದರೆ ದುಃಖ ಅನಿಸುತ್ತಿದೆ. ರಾಜಕೀಯ ಗೊಂದಲ, ಅಸ್ಥಿರತೆ, ಭ್ರಷ್ಟಾಚಾರ ಮುಂದುವರೆದಿದೆ; ಈ ಎಲ್ಲವನ್ನೂ ಮರೆಮಾಚಲು ಕೋವಿಡ್ ಲಸಿಕೆಯ ವಿಷಯವನ್ನು ಎತ್ತಿದ್ದಾರೆ; ನನ್ನ ಪ್ರಕಾರ ಕಾಂಗ್ರೆಸ್ ಪಕ್ಷವು ದರಿದ್ರ ಮಾನಸಿಕತೆ ಹೊಂದಿದೆ. 64 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಒಂದೇ ಒಂದು ಸ್ವದೇಶಿ ಲಸಿಕೆ ಸಂಶೋಧನೆ ಮಾಡಲಿಲ್ಲ; ಯಾವುದೇ ಲಸಿಕೆ ನೀಡಿದರೂ ಅವನ್ನು ಆಮದು ಮಾಡಿಕೊಂಡಿದ್ದರು ಎಂದು ಟೀಕಿಸಿದರು.
ನಾವು ಆಂತರಿಕವಾಗಿ ಕೋವಿಡ್ ಲಸಿಕೆಯನ್ನು ದೇಶೀಯವಾಗಿ ಸಂಶೋಧನೆ ಮಾಡಿ ಉತ್ಪಾದಿಸಿದ್ದೇವೆ. ಸುಮಾರು 110ರಿಂದ 120 ಕೋಟಿ ಜನರು ಇದನ್ನು ತೆಗೆದುಕೊಂಡಿದ್ದಾರೆ. 150 ದೇಶಗಳಿಗೂ ಕಳುಹಿಸಿದ್ದೇವೆ ಎಂದು ವಿವರಿಸಿದರು. ಆದರೆ ಈ ಲಸಿಕೆಯನ್ನು ಅವಮಾನ ಮಾಡುವ ಕೆಲಸ ನಡೆದಿದೆ ಎಂದು ಆಕ್ಷೇಪಿಸಿದರು.
ಮೋದಿಯವರನ್ನು ವಿರೋಧಿಸುವ ಭರದಲ್ಲಿ ಈ ರೀತಿಯ ಹೇಳಿಕೆ ಕೊಟ್ಟು ದೇಶದ ಸಾಧನೆಯನ್ನು ವಿರೋಧಿಸುತ್ತಿದ್ದಾರೆ. ಕೋವಿಡ್ ಲಸಿಕೆಯನ್ನು ಯಾವುದೇ ಆಧಾರವಿಲ್ಲದೇ ಅಪಮಾನ ಮಾಡುತ್ತಿರುವುದು ಖಂಡನೀಯ ಎಂದರು.
ಅನೇಕ ತಜ್ಞರೂ ಈ ರೀತಿ ಆಗಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ ಗೊಂದಲ, ಅಸ್ಥಿರತೆ, ಭ್ರಷ್ಟಾಚಾರ ಮುಂದುವರೆದಿದೆ; ಅಲ್ಲದೇ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಶಾಸಕರೇ ಘಂಟಾಘೋಷವಾಗಿ ಹೇಳುತ್ತಿದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ಕರ್ನಾಟಕದಲ್ಲಿದೆ ಎಂದು ಬಿ.ಆರ್. ಪಾಟೀಲರು ಹೇಳಿದ್ದಾರೆ. ಕೆಲಸ ಮಾಡಿಸಲು ದುಡ್ಡಿಲ್ಲ ಎಂದು ರಾಯರೆಡ್ಡಿಯವರು ಹೇಳಿದರು. ರಾಜು ಕಾಗೆ, ಎನ್.ವೈ.ಗೋಪಾಲಕೃಷ್ಣ, ಪರಮೇಶ್ವರ್ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ ಎಂದು ವಿವರಿಸಿದರು.