ಮೈಸೂರು, ಜು. 06 (DaijiworldNews/AA): ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಚರ್ಚೆಯ ಬಗ್ಗೆ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯಾಧ್ಯಕ್ಷನಾಗಿ ಮುಂದುವರಿಯುವ ವಿಶ್ವಾಸವಿದೆ. ನನ್ನ ಹೋರಾಟದ ಬಗ್ಗೆ ನಮ್ಮ ಕಾರ್ಯಕರ್ತರು ಮತ್ತು ಹೈಕಮಾಂಡ್ಗೆ ತೃಪ್ತಿಯಿದೆ. ಅಂತಿಮವಾಗಿ ನಮ್ಮ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ನನ್ನ ನಗು ಮುಖ ನೋಡಿದರೆ ನಿಮಗೆ ನಾನು ಬದಲಾಗುತ್ತೇನೆ ಎಂದು ಅನ್ನಿಸುತ್ತದಾ? ನಾನು ಬದಲಾಗಬೇಕಾ? ಮುಂದುವರಿಯಬೇಕಾ? ಮಾಧ್ಯಮದವರೇ ಹೇಳಿ" ಎಂದು ಪ್ರಶ್ನೆ ಮಾಡಿದ್ದಾರೆ.
"ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದೆ. ಇ-ಖಾತಾ ಪಡೆಯಲು ಜನ ತಿಂಗಳುಗಟ್ಟಲೇ ಪರದಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲೂ ಆಸ್ತಿ ತೆರಿಗೆ ಹೆಚ್ಚಿಸಲು ಸರ್ಕಾರ ಚಿಂತನೆ ಆರಂಭಿಸಿದೆ. ಬಿಜೆಪಿ ಹೋರಾಟದ ಫಲವಾಗಿ ವಾಲ್ಮೀಕಿ ಹಗರಣ ಸಿಬಿಐ ತನಿಖೆಗೆ ಹೋಗಿದೆ. ಸಿದ್ದರಾಮಯ್ಯ ಸರ್ಕಾರ ಭಂಡ ಸರ್ಕಾರ. ಭಂಡತನದಿಂದ ಸರ್ಕಾರ ಮುಂದುವರಿಯುತ್ತಿದೆ. ಕಾಂತರಾಜ್ ವರದಿಯನ್ನು ಸಿಎಂ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡುತ್ತಿದ್ದಾರೆ. ಕುರ್ಚಿ ಚರ್ಚೆ ಶುರುವಾದಾಗ ಕಾಂತರಾಜ್ ವರದಿಯನ್ನು ಸಿಎಂ ಮುನ್ನೆಲೆಗೆ ತರುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸುರ್ಜೆವಾಲ ಅವರು ಸಿಎಂ ರಾಜೀನಾಮೆ ಪಡೆಯಲು ಭೂಮಿಕೆ ಸಜ್ಜು ಮಾಡ್ತಿದ್ದಾರೆ. ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸಲು ಕಾಂಗ್ರೆಸ್ನಲ್ಲಿ ವೇದಿಕೆ ಸಿದ್ಧವಾಗಿದೆ. ಸಿದ್ದರಾಮಯ್ಯ ಅವರು ಅತಿ ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ. ಸಿಎಂ ಸ್ಥಾನ ಪಲ್ಲಟ ಆಗುತ್ತದೆ. ಇದಕ್ಕಾಗಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಓಬಿಸಿ ಸಮಿತಿಗೆ ಅಧ್ಯಕ್ಷರಾಗಿ ಮಾಡಿದ್ದಾರೆ. ಇದರ ಅರ್ಥ ಸಿದ್ದರಾಮಯ್ಯ ದೆಹಲಿಗೆ ಶಿಫ್ಟ್ ಖಚಿತ" ಎಂದಿದ್ದಾರೆ.