ಶಿವಮೊಗ್ಗ,ಜೂ23(DaijiworldNews/AZM):ರಾಜ್ಯ ಸರಕಾರ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವ ಯೋಜನೆಗೆ ಮುಂದಾಗಿದ್ದು, ಈ ಕ್ರಮಕ್ಕೆ ಮಲೆನಾಡು ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಾಗೂ ರಾಜ್ಯ ಸರಕಾರದ ಧೋರಣೆಯನ್ನು ಖಂಡಿಸಿ ಜುಲೈ 10ಕ್ಕೆ ಶಿವಮೊಗ್ಗ ಬಂದ್ಗೆ ಕರೆ ನೀಡಲಾಗಿದೆ.
ಶನಿವಾರ ಜಿಲ್ಲೆಯ ನೌಕರರ ಭವನದಲ್ಲಿ ತಾಲೂಕು ಒಕ್ಕೂಟದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಶಿವಮೊಗ್ಗದ ವಿವಿಧ ಸಂಘ, ಸಂಸ್ಥೆಗಳ ಮತ್ತು ಜನಪ್ರತಿನಿಧಿಗಳು ಸೇರಿ ಈ ಯೋಜನೆ ಜಾರಿ ಆದರೆ ಮಲೆನಾಡಿನ ಜನರಿಗೆ ತೊಂದರೆಯಾಗುತ್ತದೆ ಎಂದು ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಭೆಯಲ್ಲಿ ಈ ಯೋಜನೆಯ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಇಂಧನ ತಜ್ಞ ಶಂಕರ್ ಶರ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಯಿತು. ಈ ಯೋಜನೆಯ ಬಗ್ಗೆ ಮಲೆನಾಡು ಜನರಿಗೆ ಮನವರಿಕೆ ಮಾಡಿ ಯೋಜನೆ ವಿರುದ್ಧ ಪ್ರಬಲ ಹೋರಾಟ ಮಾಡಲು ಹಿರಿಯ ಸಾಹಿತಿ ನಾ. ಡಿಸೋಜ ಹಾಗೂ ದೇಸಿ ಚಿಂತಕ ಪ್ರಸನ್ನ ಅವರನ್ನು ಒಳಗೊಂಡ ಸಂಚಾಲನ ಸಮಿತಿಯೊಂದನ್ನು ರಚಿಸಲಾಗಿದೆ.
ಇದೇ ವೇಳೆ ಬಿಜೆಪಿಯ ಟಿ.ಡಿ. ಮೇಘರಾಜ್, ಕಾಂಗ್ರೆಸ್ನ ಬಿ.ಆರ್.ಜಯಂತ್, ಮಲ್ಲಿಕಾರ್ಜುನ ಹಕ್ರೆ, ಪ್ರಭಾವತಿ ಚಂದ್ರಕಾಂತ್, ಕಲಗೋಡು ರತ್ನಾಕರ್ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು