ಮುಂಬೈ, ಜೂ 24 (Daijiworld News/MSP): ಮಹಾರಾಷ್ಟ್ರದ ನಾಂದೇಡ್ ಕುಟುಂಬ ನ್ಯಾಯಾಲಯ ವಿಶಿಷ್ಟ ಪ್ರಕರಣ ಒಂದರಲ್ಲಿ, ವಿಚ್ಚೇದನ ಕೊಡಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ಪತಿಯಿಂದ ಮಹಿಳೆಗೆ ಮತ್ತೊಂದು ಮಗು ಹೊಂದುವ ಅವಕಾಶ ನೀಡಿದೆ.
ತನಗೆ ಈಗಾಗಲೆ 35 ವರ್ಷವಾಗಿದ್ದು, ನಮಗೆ ಈಗಾಗಲೇ ಒಂದು ಮಗುವಿದ್ದು, ಪತಿಯಿಂದ ತನಗೆ ಮತ್ತೊಂದು ಮಗು ಪಡೆಯಲು ಅವಕಾಶ ನೀಡಬೇಕೆಂದು ಮಹಿಳೆಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಇದೇ ನ್ಯಾಯಾಲಯದಲ್ಲಿ ಮಹಿಳೆಯ ಪತಿಯು, ತನ್ನ ಪತ್ನಿಯ ಕ್ರೂರತೆಯನ್ನು ತಡೆಯಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ವಿಚ್ಚೇದನ ನೀಡಬೇಕೆಂದು ವ್ಯಕ್ತಿಯೊಬ್ಬರು 2017 ರಲ್ಲಿ ಕೋರ್ಟ್ ಮೊರೆ ಹೋಗಿದ್ದರು.
ಮಹಿಳೆಯ ಕೋರಿಕೆಯನ್ನು ಕೋರ್ಟ್ ಕೂಡಾ ಮಾನ್ಯ ಮಾಡಿದ್ದು, ಮಹಿಳೆಯ ಗರ್ಭ ಧಾರಣೆಯ ಹಕ್ಕನ್ನು ಎತ್ತಿ ಹಿಡಿದಿದೆ. ಆದರೆ ಕೋರ್ಟ್ ತನ್ನ ಪತ್ನಿಯ ಮನವಿಯನ್ನು ಪುರಸ್ಕರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪತಿ, ವಿಚ್ಚೇದನ ಪಡೆಯಲು ಮುಂದಾಗಿರುವ ತನ್ನಿಂದ ಮತ್ತೊಂದು ಮಗು ಕೇಳುವುದು ಸಾಮಾಜಿಕ ನಿಯಮಗಳಿಗೆ ವಿರುದ್ಧವಾದದ್ದು ಎಂದು ವಾದಿಸಿದ್ದರು.
ಆದರೆ ಇದಕ್ಕೆ ಕೋರ್ಟ್ ಸಂತಾನೋತ್ಪತ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಅವರಿಗೆ ಹಕ್ಕು ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ ಕಾನೂನುಗಳಲ್ಲಿ ಯಾವುದೇ ಪ್ರಸ್ತಾಪ ಇಲ್ಲದಿರುವ ಹಿನ್ನಲೆಯಲ್ಲಿ ಕೋರ್ಟ್ ಅಂತರಾಷ್ಟ್ರೀಯ ಕಾನೂನುಗಳ ಮೊರೆ ಹೋಗಿತ್ತು.
ಸಂತಾನೋತ್ಪತ್ತಿ ಸಾಮರ್ಥ್ಯ ಸೀಮಿತವಾಗಿರುವುದರಿಂದ ಮಹಿಳೆ ಆಗ್ರಹಕ್ಕೆ ಕೋರ್ಟ್ ಸಮ್ಮತಿಸಿದ್ದು ಕೃತಕ ಗರ್ಭಧಾರಣೆ ತಂತ್ರಜ್ಞಾನ ತಜ್ಞರೊಂದಿಗೆ (ಐವಿಎಫ್ ತಜ್ಞ) ಸಮಾಲೋಚನೆಗೆ ದಂಪತಿಗಳನ್ನು ಕಳುಹಿಸಿದೆ.