ನವದೆಹಲಿ,ಜೂ 24 (Daijiworld News/MSP): ಆರ್ ಬಿ ಐ ನ ಡೆಪ್ಯುಟಿ ಗವರ್ನರ್ ವಿರಳ್ ಆಚಾರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರ್ ಬಿ ಐಗೆ ಹೆಚ್ಚಿನ ಸ್ವಾಯತ್ತತೆ ಬೇಕು ಎಂದು ಆಗ್ರಹಿಸುತ್ತಿದ್ದ ವಿರಳ್ ಆಚಾರ್ಯ ತಮ್ಮ ಅಧಿಕಾರಾವಧಿ ಕೊನೆಗೊಳ್ಳುವುದಕ್ಕೂ 6 ತಿಂಗಳ ಮುನ್ನವೇ ಆರ್ ಬಿಐ ಡೆಪ್ಯುಟಿ ಗವರ್ನರ್ ಹುದ್ದೆಯಿಂದ ಹೊರನಡೆದಿದ್ದಾರೆ. ವಿಶೇಷ ಎಂದರೆ ಆರ್ ಬಿ ಐ ಉನ್ನತ ಹುದ್ದೆಯ ಇಬ್ಬರು ತಮ್ಮ ಸ್ಥಾನಕ್ಕೆ ಕಳೆದ 6 ತಿಂಗಳೊಳಗೆ ರಾಜೀನಾಮೆ ನೀಡಿದಂತಾಗಿದೆ.
ಇತ್ತೀಚೆಗೆ ಆರ್ ಬಿಐ ನ ಹಾಲಿ ಗವರ್ನರ್ ಹಾಗೂ ಡಾ.ಆಚಾರ್ಯಾಗೂ ಭಿನ್ನಾಭಿಪ್ರಾಯ ಮೂಡಿತ್ತು. ವಿತ್ತೀಯ ಕೊರತೆ ವಿಚಾರವಾಗಿ ಇತ್ತೀಚಿನ ವಿತ್ತೀಯ ನೀತಿ ಸಭೆಯಲ್ಲಿ ಇವರಿಬ್ಬರ ನಡುವೆ ತಿಕ್ಕಾಟ ಪ್ರಾರಂಭವಾಗಿತ್ತು. ಮಾತ್ರವಲ್ಲದೆ ಹಿಂದಿನ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ವಿರಳ್ ಆಚಾರ್ಯ ಅವರಿಗೂ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಮನಸ್ಸಿರಲಿಲ್ಲ ಎಂದು ವಿಶ್ಲೇಷಿಸಲಾಗಿತ್ತು.
2017, ಜ.23 ರಂದು ಆರ್ ಬಿಐ ಗೆ ಸೇರಿದ್ದ ವಿರಳ್ ಆಚಾರ್ಯ, ಆರ್ಥಿಕ ಉದಾರೀಕರಣದ ನಂತರ ಆರ್ ಬಿಐ ನ ಅತಿ ಕಿರಿಯ ಡೆಪ್ಯುಟಿ ಗವರ್ನರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ಆರ್ಬಿಐ ಡೆಪ್ಯುಟಿ ಗವರ್ನರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿರಳ್ ಆಚಾರ್ಯ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯ ಮುಂದುವರೆಸಲಿದ್ದಾರೆ.