ಬೆಂಗಳೂರು, ಜು. 11 (DaijiworldNews/AA): ಎಐಸಿಸಿ ಅಧ್ಯಕ್ಷರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಉಸ್ತುವಾರಿ ಸುರ್ಜೇವಾಲಾ ಅವರೇ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ಚರ್ಚೆ ಯಾಕೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ನಾನೇ 5 ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿ ಅಭಿಪ್ರಾಯ ಸಂಗ್ರಹವೇ ಮಾಡಿಲ್ಲ. ಯಾರೋ ಇಬ್ಬರು ಮಾತನಾಡಿದ್ದರೆ ಅದೇನು ದೊಡ್ಡದಲ್ಲ ಅಂತ ಹೇಳಿದ್ದಾರೆ. ನಾಯಕತ್ವದ ಬದಲಾವಣೆ ಅಭಿಪ್ರಾಯವೇ ತೆಗೆದುಕೊಳ್ಳದೇ ಇರುವಾಗ ಸಂಖ್ಯಾಬಲದ ಚರ್ಚೆ ಎಲ್ಲಿ ಬರುತ್ತದೆ ಎಂದರು.
ನಾನು, ಡಿಕೆ ಶಿವಕುಮಾರ್ ಹೈಕಮಾಂಡ್ ಏನ್ ಹೇಳುತ್ತದೋ ಅದನ್ನು ಪಾಲನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ. ಹೈಕಮಾಂಡ್ ಸ್ಪಷ್ಟವಾಗಿ ನಾಯಕತ್ವದ ಬಗ್ಗೆ ಹೇಳಿದ ಮೇಲೆ ಎಲ್ಲವೂ ಮುಗಿಯಿತು ಎಂದು ಸ್ಪಷ್ಟನೆ ನೀಡಿದರು.
ದೆಹಲಿಗೆ ಹೋಗಬಾರದು, ಹೈಕಮಾಂಡ್ ಗೆ ಭೇಟಿಯಾಗಬಾರದು ಅಂದರೆ ಹೇಗೆ? ನವೆಂಬರ್ ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ, ಡಿಸೆಂಬರ್ ಶಾಂತಿ ಎನ್ನುವುದು ವಿಷಯವೇ ಅಲ್ಲ. ಮಾಧ್ಯಮಗಳ ಮುಂದೆ ಪಕ್ಷದ ವಿಚಾರ ಹೇಳಿದರೆ ತೀರ್ಮಾನವಾಗುವುದಿಲ್ಲ ಎಂದು ತಿಳಿಸಿದರು.