ಮೈಸೂರು, ಜು. 11 (DaijiworldNews/AA): "ಸಿಎಂ ಬದಲಾವಣೆ ವಿಚಾರ ಮುಗಿದ ಕಥೆ. ಅದರ ಬಗ್ಗೆ ನಾವ್ಯಾರೂ ಮಾತನಾಡಬಾರದು" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಐದು ವರ್ಷದವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲಿಗೆ ಚರ್ಚೆಗಳೆಲ್ಲವೂ ಮುಗಿಯಿತೆಂದೇ ಅರ್ಥ. ಮುಗಿದ ಕಥೆಯ ಬಗ್ಗೆ ನಮ್ಮ ಪ್ರತಿಕ್ರಿಯೆ ನೀಡಿದರೆ ಅದು ತಪ್ಪಾಗುತ್ತದೆ. ಸೆಪ್ಟೆಂಬರ್ನಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ. ಎಲ್ಲವೂ ಶಾಂತಿಯಷ್ಟೆ. ಎಲ್ಲಾ ಪ್ರಶ್ನೆಗಳಿಗೂ ಸಿಎಂ ಸಿದ್ದರಾಮಯ್ಯನವರೇ ಉತ್ತರಿಸಿದ್ದಾರೆ" ಎಂದು ತಿಳಿಸಿದರು.
'ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮಿ ಹಣ ಕೊಡುತ್ತಿದ್ದೇವೆ' ಎಂಬ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿಕೆಯನ್ನು ಅವರು ತಳ್ಳಿಹಾಕಿದರು. "ನಾವು ಪ್ರತಿ ತಿಂಗಳೂ ಹಣ ಹಾಕುತ್ತಿದ್ದೇವೆ. ಮೇ ತಿಂಗಳವರೆಗೂ ಸಂಪೂರ್ಣವಾಗಿ ನೀಡಿದ್ದೇವೆ. ಹಣ ಹಾಕಲು ಯಾವ ತೊಡಕುಗಳೂ ಇಲ್ಲ. ರೇವಣ್ಣ ಯಾಕೆ ಆ ರೀತಿ ಹೇಳಿದ್ದಾರೆಯೋ ಗೊತ್ತಿಲ್ಲ. ಅವರೊಂದಿಗೆ ಮಾತನಾಡುತ್ತೇನೆ. ನಾವು ಮಾತು ಕೊಟ್ಟಂತೆ ಫಲಾನುಭವಿಗಳಿಗೆ ಹಣ ಹಾಕುತ್ತಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.