ನವದೆಹಲಿ, ಜು. 12 (DaijiworldNews/AK): ಈಶಾನ್ಯ ದೆಹಲಿಯ ಸೀಲಾಮ್ಪುರದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಅವಘಡ ಸಂಭವಿಸಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ದೆಹಲಿಯ ವೆಲ್ಕಮ್ ಪ್ರದೇಶದಲ್ಲಿರುವ ಜನತಾ ಮಜ್ದೂರ್ ಕಾಲೋನಿಯಲ್ಲಿ ಶನಿವಾರ ಜುಲೈ 12 ರ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈಗಾಗಲೇ 14 ತಿಂಗಳ ಮಗು ಸೇರಿ 8 ಮಂದಿಯನ್ನು ರಕ್ಷಿಸಲಾಗಿದೆ.
ಇನ್ನೂ 6ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 7 ಅಗ್ನಿಶಾಮಕ ದಳದವರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬೆಳಗ್ಗೆ 7 ಗಂಟೆಗೆ ಕಟ್ಟಡ ಕುಸಿದ ಬಗ್ಗೆ ನಮಗೆ ಕರೆ ಬಂದಿದೆ. ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಏಳು ಅಗ್ನಿಶಾಮಕ ಟೆಂಡರ್ಗಳು ಸ್ಥಳದಲ್ಲಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.