ನವದೆಹಲಿ, ಜೂ 24 (Daijiworld News/MSP): ಕಾಂಗ್ರೆಸಿನಿಂದ ಉಚ್ಚಾಟನೆಗೊಂಡಿದ್ದ ಕಣ್ಣೂರಿನ ಮಾಜಿ ಲೋಕ ಸಭಾ ಸದಸ್ಯ ಹಾಗೂ ಶಾಸಕ ಎ.ಪಿ ಅಬ್ದುಲ್ಲ ಕುಟ್ಟಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ಎ.ಪಿ ಅಬ್ದುಲ್ಲ ಅವರು ಸೋಮವಾರ ನವದೆಹಲಿಯಲ್ಲಿ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಬ್ದುಲ್ಲ ಕುಟ್ಟಿ " ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು ಮಾತುಕತೆ ನಡೆಸಿದ್ದು, ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅಹ್ವಾನ ನೀಡಿದ್ದು, ಶೀಘ್ರದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲು ಸೂಚಿಸಿದ್ದಾರೆ. ಮಾತ್ರವಲ್ಲದೆ ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗ ಮಾಡಿರುವುದನ್ನು ಅವರಿಗೆ ತಿಳಿಸಿದಾಗ ಸಂತಸ ವ್ಯಕ್ತಪಡಿಸಿದರು " ಎಂದು ತಿಳಿಸಿದರು.
ಮೋದಿ ಭೇಟಿ ಬಳಿಕ ಅಬ್ದುಲ್ಲ ಕುಟ್ಟಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಕಾರಣ ನೀಡಿ ಕೇರಳ ಕಾಂಗ್ರೆಸ್ ಘಟಕವು ಅಬ್ದುಲ್ಲ ಕುಟ್ಟಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಲೋಕಸಭಾ ಚುನಾವಣೆಯ ನಂತರ ಅಬ್ದುಲ್ಲ ಕುಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣವನ್ನು ಹೊಗಳಿದ್ದರು. ಕಾಂಗ್ರೆಸಿನಿಂದ ಉಚ್ಚಾಟಣೆಗೊಂಡ ನಂತರ ಇವರು ಬಿಜೆಪಿ ಕೇರಳ ಘಟಕದ ನಾಯಕರನ್ನು ಭೇಟಿಮಾಡಿದ್ದರು ಎಂದು ವರದಿಯಾಗಿತ್ತು.
ಸಿಪಿಐಎಂ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಕ್ಷೇತ್ರಕ್ಕಿಳಿದ ಎ.ಪಿ ಅಬ್ದುಲ್ಲ ಕುಟ್ಟಿ ಇದೇ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ದಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಕಾರಣಕ್ಕಾಗಿ ಸಿಪಿಐಎಂ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಇವರು ಕಾಂಗ್ರೆಸಿಗೆ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಟಿಕೆಟಿನಲ್ಲಿ ಕೇರಳ ವಿಧಾನ ಸಭೆಗೆ ಸ್ಪರ್ಧಿಸಿದ್ದ ಇವರು ದಾಖಲೆ ಬಹುಮತದಿಂದ ಆಯ್ಕೆ ಆಗಿದ್ದರು.