ನವದೆಹಲಿ,ಜೂ 24 (Daijiworld News/MSP): ಇಪ್ಲಾಸ್ಟಿಕ್ ಅನೀಮಿಯಾ (ರಕ್ತಹೀನತೆ) ಕಾಯಿಲೆಯಿಂದ ಬಳಲುತ್ತಿದ್ದ ಬಡ ರೈತನ ಪುತ್ರಿಗೆ ಚಿಕಿತ್ಸೆಗಾಗಿ ಮೋದಿ 30 ಲಕ್ಷ ರೂ.ಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೆರವು ಮಂಜೂರು ಮಾಡಿದ್ದಾರೆ. ಬಾಲಕಿಯ ತಂದೆ ತನ್ನ ಮಗಳ ಚಿಕಿತ್ಸೆಗೆ ನೆರವು ನೀಡುವಂತೆ ಕೋರಿ ಪತ್ರ ಬರೆದಿದ್ದು, ಇದಕ್ಕೆ ಸ್ಪಂದಿಸಿದ ಮೋದಿ ನೆರವು ನೀಡಿದ್ದಾರೆ.
ಜೈಪುರದ ಸುಮೇರ್ ಸಿಂಗ್ ಎಂಬ ಬಡ ರೈತ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತನ್ನ ಕಷ್ಟದ ಕಥೆಯನ್ನು ತಿಳಿಸಿದ್ದರು. ತನ್ನ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯ ಚಿಕಿತ್ಸೆಗೆ ಸರ್ಕಾರ ನೆರವು ನೀಡಬೇಕು. ನಾನು ಆಕೆಯ ಚಿಕಿತ್ಸೆಗಾಗಿ ನಮ್ಮ ಮನೆ, ಜಮೀನು ಮಾರಾಟ ಮಾಡಿ 7 ಲಕ್ಷ ರೂ. ವೆಚ್ಚ ಮಾಡಿದ್ದೇನೆ ಎಂದಿದ್ದರು. ರೈತ ಸುಮೇರ್ ಸಿಂಗ್ ಪತ್ರಕ್ಕೆ ಪ್ರಧಾನಿಗಳ ಕಾರ್ಯಾಲಯ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿಗಳ ರಾಷ್ಟ್ರಿಯ ಪರಿಹಾರ ನಿಧಿಯಿಂದ 30 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.
ಬಾಲಕಿ ಬದುಕಬೇಕಾದರೆ ಅಕೆಗೆ ಮೂಳೆ ಮಜ್ಜೆಯ ಕಸಿ ಅಗತ್ಯವಿದೆ. ಏಕೆಂದರೆ ಬಾಲಕಿಯ ಅಸ್ಥಿಮಜ್ಜೆ ಈಗಾಗಲೇ ನಿಷ್ಪಯೋಜಕವಾಗಿದೆ. ಈ ಚಿಕಿತ್ಸೆಗೆ ಅಪರೇಷನ್ ಅಗತ್ಯವಿದ್ದು, ಜೈಪುರ ಆಸ್ಪತ್ರೆ ಸುಮಾರು 10 ಲಕ್ಷ ರೂ.ಗಳನ್ನು ಆಗುತ್ತದೆ ಎಂದು ತಿಳಿಸಿದೆ. ಆಕೆಯ ದೇಹದಲ್ಲಿ ಹೊಸ ರಕ್ತಗಳ ಉತ್ಪಾದನೆ ಆಗದಿರುವುದರಿಂದ ಆಕೆಗೆ ಮೂಳೆ ಮಜ್ಜೆಯ ಕಸಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು.
ಅಪ್ಲ್ಯಾಸ್ಟಿಕ್ ಅನಿಮಿಯಾ ಎಂಬುವುದು ದೇಹ ಹೊಸ ರಕ್ತಕಣಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಉಂಟಾಗುವ ಸ್ಥಿತಿಯಾಗಿದೆ. ಈ ವೇಳೆ ಹೆಚ್ಚಿನ ರಕ್ತಸ್ರಾವ, ಸೋಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಬಹುಬೇಗ ಚಿಕಿತ್ಸೆ ಲಭ್ಯವಾಗದಿದ್ದರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.