ಬೆಂಗಳೂರು,ಜೂ24(DaijiworldNews/AZM):ವಿಧಾನಸೌಧದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಆತ್ಮಹತ್ಯೆ ಯತ್ನಕ್ಕೂ ಮುನ್ನಾ ಇದು ಆತ್ಮಹತ್ಯೆ ಅಲ್ಲ ಬಲಿದಾನ ಎಂದು ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿನ ಶೌಚಾಲಯದಲ್ಲಿ ಕುತ್ತಿಗೆ ಹಾಗೂ ಕೈಯನ್ನು ಬ್ಲೇಡ್ ನಿಂದ ಕೊಯ್ದು ಕೊಂಡು ರೇವಣ್ಣ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿಟ್ಟಿದ್ದ ಈ ಪತ್ರ ಪೊಲೀಸರಿಗೆ ದೊರೆತಿದ್ದು, ಇದು ನನ್ನ ಸಾವಲ್ಲ, ನನ್ನ ಬಲಿದಾನ ಎಂದು ಭಾವಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಚಿಂತಾಮಣಿ ತಾಲೂಕಿನ ಅನೂರು ಗ್ರಾಮ ಪಂಚಾಯತ್ ನಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದ ರೇವಣ್ಣ ಕುಮಾರ್, ರಾಜ್ಯಾದ್ಯಂತ 6 ಸಾವಿರಕ್ಕೂ ಹೆಚ್ಚು ಗ್ರಂಥಪಾಲಕರು ಖಾಯಂ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಆದರೇ ಇದುವರೆಗೂ ಖಾಯಂ ಆಗಿಲ್ಲ. ಹೀಗಾಗಿ ತನ್ನ ಆತ್ಮಹತ್ಯೆ. ಅಂತವರನ್ನು ಖಾಯಂ ಮಾಡುವುದಕ್ಕಾಗಿ ಬಲಿದಾನವಾಗಲಿ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸುವ ಮುನ್ನಾ ರೇವಣ್ಣ ಬರೆದ ಪತ್ರ ಹೀಗಿದೆ:
'ಸನ್ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರೇ, ತಾನೂ ಚಿಂತಾಮಣಿ ತಾಲೂಕಿನ ಅನೂರು ಗ್ರಾಮಪಂಚಾಯ್ತಿಯಲ್ಲಿ ಗ್ರಂಥಪಾಲಕನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ನನ್ನಂತೆಯೇ ಸುಮಾರು 6 ಸಾವಿರ ಗ್ರಂಥಪಾಲಕರು ಹೀಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಯಂ ಆಗಬಹುದು ಎಂಬುದಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ದಯವಿಟ್ಟು ನನ್ನ ಆತ್ಮಹತ್ಯೆಯ ಬಗ್ಗೆ ತಪ್ಪು ತಿಳಿಯ ಬೇಡಿ. ನನ್ನ ಆತ್ಮಹತ್ಯೆ 6 ಸಾವಿರ ಲೈಬ್ರರಿ ನೌಕರರ ಪ್ರತೀಕವಾಗಿ ಬಲಿದಾನವಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಸಾವು ಆತ್ಮಹತ್ಯೆಯಲ್ಲ. ಇದು ಸರ್ಕಾರಕ್ಕೆ, ನನ್ನಂತೆಯೇ ನೌಕರಿ ಖಾಯಂ ಆಗುತ್ತದೆ ಎಂದು ಕಾಯುತ್ತಿರುವ ಲೈಬ್ರರಿ ನೌಕರರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರೇ ಬಲಿದಾನವಾಗಿದೆ.
ನಾವು ಉದ್ಯೋಗ ಕಾಯಂಗಾಗಿ ಎಷ್ಟೇ ಓಡಾಡಿದರು ಖಾಯಂ ಆಗಿಲ್ಲ. ನ್ಯಾಯ ಸಿಕ್ಕಿಲ್ಲ. ಖಾಯಂಗಾಗಿ ಪ್ರಧಾನಿಯಿಂದ ಹಿಡಿದು, ರಾಷ್ಟ್ರಪತಿವರೆಗೆ ಸಂಪರ್ಕ ಮಾಡಿದೆ. ಆದರೇ ಯಾರಿಂದರೂ ನ್ಯಾಯ ಸಿಗಲಿಲ್ಲ. ನ್ಯಾಯ ದೊರಕುವ ಆಸೆಯೂ ಕಾಣಲಿಲ್ಲ. ನೀವಾದ್ರೂ ನ್ಯಾಯ ಕೊಡಿಸಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರೇ.. ಇದು ಆತ್ಮಹತ್ಯೆ ಪತ್ರವಲ್ಲ. ಬದಲಾಗಿ ಬಲಿದಾನದ ಪತ್ರ ಎಂದು ಭಾವಿಸಿ' ಎಂದು ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.