ಬೆಂಗಳೂರು,ಜೂ24(DaijiworldNews/AZM): ಸದ್ಯಕ್ಕೆ ಬಸ್ ಪ್ರಯಾಣ ದರವನ್ನು ಏರಿಸುವ ಪ್ರಸ್ತಾಪವನ್ನು ರಾಜ್ಯ ಸರಕಾರ ಕೈಬಿಟ್ಟಿದೆ. ಈ ಕುರಿತು ಇಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ ಅಧಿಕಾರಗಳ ಸಭೆ ನಡೆದಿತ್ತು.
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬಸ್ ದರವನ್ನು ಶೇಕಡವಾರು ಏರಿಕೆಗೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಏರುತ್ತಿರುವ ತೈಲ ಬೆಲೆ, ಏರಿಕೆ ಆಗಿರುವ ಸಾರಿಗೆ ನೌಕರರ ವೇತನ, ದುಬಾರಿ ಆಗಿರುವ ನಿರ್ವಹಣೆ ವೆಚ್ಚ ಹಾಗೂ ಕಳೆದ ಹದಿನೆಂಟು ತಿಂಗಳಿಂದ ಬಸ್ ದರ ಏರಿಕೆ ಆಗದಿರುವ ಕುರಿತು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದ್ದರು. ಆದರೆ, ಸದ್ಯದ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೇ ಮತ್ತೊಂದು ಸಭೆ ಸೇರುವ ತೀರ್ಮಾನ ಮಾಡಲಾಯಿತು. ಮುಂದಿನ ಸಭೆಯಲ್ಲಿ ಬಸ್ ದರ ಏರಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಇದನ್ನು ಸರಿದೂಗಿಸಲು ಬಸ್ ಪ್ರಯಾಣ ದರವನ್ನು ಶೇಕಡ 18 ರಷ್ಟು ಏರಿಕೆ ಮಾಡುವ ಸಂಬಂಧ ಸಾರಿಗೆ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.