ನವದೆಹಲಿ, ಜು. 16 (DaijiworldNews/AA): ರಾಜ್ಯಾಧ್ಯಕ್ಷರ ನೇಮಕ ಮಾಡಿರೋದು ನಮ್ಮ ಹೈಕಮಾಂಡ್. ಬಿ.ವೈ ವಿಜಯೇಂದ್ರ ಅವರು ಹಳೆ ಬೇರು ಹೊಸ ಚಿಗುರು ರೀತಿಯಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸುವ ಅಗತ್ಯ ಇಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ರಾಜ್ಯಧ್ಯಕ್ಷರ ಪರ ಬ್ಯಾಟ್ ಮಾಡಲು ಎಂಪಿ ರೇಣುಕಾಚಾರ್ಯ ನೇತೃತ್ವದ ತಂಡ ದೆಹಲಿಗೆ ತೆರಳಿದೆ. ಈ ವೇಳೆ ದೆಹಲಿಯಲ್ಲಿ ಮಾತನಾಡಿದ ಅವರು, "ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚಿಸಲು ದೆಹಲಿಗೆ ಬಂದಿಲ್ಲ. ಖಾಸಗಿ ಕಾರ್ಯಕ್ರಮ ಹಿನ್ನೆಲೆ ದೆಹಲಿ ಭೇಟಿ ಅಷ್ಟೇ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ" ಎಂದು ಹೇಳಿದರು.
ನಮ್ಮಲ್ಲಿ ಯಾವುದೇ ಪರ-ವಿರೋಧ, ಭಿನ್ನಮತ ಇಲ್ಲ, ಅಭಿಪ್ರಾಯ ವ್ಯತ್ಯಾಸ ಅಷ್ಟೇ. ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಬೇಕು. ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ಕಲಹ, ರೋಗಗ್ರಸ್ತ ಕಾಂಗ್ರೆಸ್ ಆಗಿದೆ. ಸುಳ್ಳು ಭರವಸೆ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು. 40% ಸಿಎಂ ಅಂದರು, ಈಗ ಅವರು 80% ಕಮಿಷನ್ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ನಾಯಕರಾದ ರಾಜಶೇಖರ್, ಮಾಡಾಳ್ ಮಲ್ಲಿಕಾರ್ಜುನ್ ಮತ್ತಿತರರು ದೆಹಲಿಗೆ ತೆರಳಿದ್ದಾರೆ.