ಮೈಸೂರು, ಜು. 19 (DaijiworldNews/AA): "ಪ್ರಧಾನಿ ನರೇಂದ್ರ ಮೋದಿ ಈ ದೇಶದ 10% ಜನರಿಗೆ ಮಾತ್ರ ಕೆಲಸ ಮಾಡೋದು, ಉಳಿದ 90% ಅವರಿಗೆ ಲೆಕ್ಕ ಇಲ್ಲ. ಆದರೆ ಕಾಂಗ್ರೆಸ್ ಬಡವರು, ದಲಿತರ ಪರ ಕೆಲಸ ಮಾಡುವ ಪಕ್ಷ" ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸಾಧನಾ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, "ಬುದ್ಧ, ಬಸವ, ಅಂಬೇಡ್ಕರ್ ತತ್ವದಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಆದರೆ ಆರ್ಎಸ್ಎಸ್, ಬಿಜೆಪಿ ಮನುವಾದಿಗಳು, ಸಂವಿಧಾನ ವಿರೋಧಿಗಳು. ಜೆಡಿಎಸ್ - ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ" ಎಂದು ಕಿಡಿಕಾರಿದರು.
"ಬಿಜೆಪಿ, ಜೆಡಿಎಸ್ ಮುಖಂಡರೂ ಈ ವೇದಿಕೆಯಲ್ಲಿ ಇರಬೇಕಿತ್ತು. ಒಂದೇ ವೇದಿಕೆಗೆ ಬಂದಿದ್ದರೆ ಅವರೇನೂ ಅಭಿವೃದ್ಧಿ ಮಾಡಿದ್ದಾರೆ? ನಾವೇನು ಅಭಿವೃದ್ಧಿ ಮಾಡಿದ್ದೇವೆ ಗೊತ್ತಾಗ್ತಿತ್ತು. ಚರ್ಚೆಗೆ ನಾನು ಬರ್ತಿನಿ, ನೀವೂ ಬನ್ನಿ ಚರ್ಚೆ ಮಾಡೋಣ" ಎಂದು ಜೆಡಿಎಸ್ - ಬಿಜೆಪಿಗೆ ಸವಾಲೆಸಗಿದರು.
"ಸರ್ಕಾರ ದಿವಾಳಿ ಆಗಿದ್ದರೆ, ಅಭಿವೃದ್ಧಿ ಯೋಜನೆ ಮಾಡುಲು ಆಗುತ್ತಿತ್ತಾ? ಸರ್ಕಾರ ದಿವಾಳಿ ಆಗಿಲ್ಲ ಎಂದರಲ್ಲದೇ ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಇದು ಅಭಿವೃದ್ಧಿಯ ಶಕ್ತಿಯನ್ನು ಜನರ ಮುಂದೆ ಇಡುವ ಸಮಾವೇಶ. ಮತ್ಸರ ಇರಬೇಕು. ಆದ್ರೆ ಬಿಜೆಪಿ, ಜೆಡಿಎಸ್ಗೆ ಇರುವಷ್ಟು ಮತ್ಸರ ಇರಬಾರದು. ಬಿಜೆಪಿ, ಜೆಡಿಎಸ್ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 98 ಸ್ಥಾನ ಗೆದ್ದಿದ್ದೇವು. ಈಗ ಜೆಡಿಎಸ್ ಗೆದ್ದಿರೋದು ಎಷ್ಟು ದೇವೇಗೌಡರೇ? ಜೆಡಿಎಸ್ ಈಗ ಗೆದ್ದಿರೋದು ಕೇವಲ 18 ಸ್ಥಾನ ಮಾತ್ರ. ಜೆಡಿಎಸ್ ಯಾವುದೇ ಕಾರಣಕ್ಕೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜೆಡಿಎಸ್ ವೀಕ್ ಆಗಿದೆ. ಹೀಗಾಗಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್, ಬಿಜೆಪಿ ಈ ರಾಜ್ಯದಲ್ಲಿ ಜನರ ಪ್ರೀತಿ ಉಳಿಸಿ ಕೊಂಡಿಲ್ಲ" ಎಂದರು.
"ಜೆಡಿಎಸ್ - ಬಿಜೆಪಿ ಸಂಸದರಿಗೆ ಮೋದಿ ಮುಂದೆ ನಿಂತು ರಾಜ್ಯಕ್ಕೆ ಆದ ಅನ್ಯಾಯ ಕೇಳುವ ಧೈರ್ಯವಿಲ್ಲ. ಮೋದಿ ಮುಂದೆ ಮಾತಾಡಲು ಇವರೆಲ್ಲಾ ನಡುಗುತ್ತಾರೆ. ಬಿಜೆಪಿ - ಜೆಡಿಎಸ್ಗೆ ನಾಚಿಕೆ ಆಗಲ್ವಾ? ನಾವು ಜೆಡಿಎಸ್ - ಬಿಜೆಪಿ ಕಾರ್ಯಕರ್ತರಿಗೂ ಗ್ಯಾರಂಟಿ ಕೊಟ್ಟಿದ್ದೇವೆ. ಗ್ಯಾರಂಟಿ ಟೀಕಿಸಲು ಅವರಿಗೆ ನಾಚಿಕೆ ಆಗಬೇಕು. ನಮ್ಮ ಗ್ಯಾರಂಟಿಯಿಂದ ಬಡವರು, ದಲಿತರು, ಅಲ್ಪಸಂಖ್ಯಾತರು ಖುಷಿಯಾಗಿದ್ದಾರೆ. ಇದೇ ಜೆಡಿಎಸ್, ಬಿಜೆಪಿಗೆ ಹೊಟ್ಟೆ ಉರಿ, ಈ ಹೊಟ್ಟೆ ಉರಿ ಬಿಡಿ. ರಾಜಕೀಯವಾಗಿ ಏನಾದ್ರೂ ಮಾತನಾಡಿ, ನಾನು ತಪ್ಪು ಮಾಡಿದ್ದರೆ ದಾಖಲೆ ಸಮೇತ ಹೇಳಿ" ಎಂದು ತಿಳಿಸಿದರು.