ನವದೆಹಲಿ, ಜೂ25(Daijiworld News/SS): ಭಾರತೀಯ ನಾಗರಿಕರಿಗೆ ಅತಿ ಶೀಘ್ರದಲ್ಲೇ ಇ-ಪಾಸ್ಪೋರ್ಟ್ಗಳು ದೊರೆಯಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇ-ಪಾಸ್ಪೋರ್ಟ್ ಪ್ರಕ್ರಿಯೆ 2017ರಿಂದಲೇ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಇದನ್ನು ಅಂತಾರಾಷ್ಟ್ರೀಯ ರಾಯಭಾರಿಗಳು ಮತ್ತು ವಿದೇಶ ಪ್ರವಾಸ ಮಾಡುವ ಅಧಿಕಾರಿಗಳಿಗೆ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ಕೊಡಲಾಗುತ್ತದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಸಚಿವ ಎಸ್. ಜೈಶಂಕರ್, ಇ-ಪಾಸ್ಪೋರ್ಟ್ಗೆ ವಿದೇಶಾಂಗ ವ್ಯವಹಾರಗಳ ಇಲಾಖೆಯು ಆದ್ಯತೆ ನೀಡಲು ನಿರ್ಧರಿಸಿದ್ದು, ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ ಪ್ರವಾಸಿ ದಾಖಲೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಒಂದು ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಕೇಂದ್ರವನ್ನು ಆರಂಭಿಸುವುದಾಗಿ ಕೇಂದ್ರ ಸರಕಾರ ಘೋಷಿಸಿದೆ. ಈಗ ಯಾವ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳಿಲ್ಲವೋ ಅಲ್ಲಿ ಅಂಚೆ ಕಚೇರಿ ಸೇವಾ ಕೇಂದ್ರ ಆರಂಭವಾಗಲಿದೆ. ಈ ಬಗ್ಗೆ ಸಾಧ್ಯತಾ ಅಧ್ಯಯನ ನಡೆಯುತ್ತಿದೆ ಎಂದು ಹೇಳಿದರು.
2017ರ ಜನವರಿಯಿಂದ ಇದುವರೆಗೆ 412 ಕೇಂದ್ರ ಸ್ಥಾಪನೆಯನ್ನು ಪ್ರಕಟಿಸಲಾಗಿದೆ. ಈಗ ದೇಶದಲ್ಲಿ ಒಟ್ಟು 95 ಪಾಸ್ಪೋರ್ಟ್ ಸೇವಾ ಕೇಂದ್ರಗಳಿವೆ. 2018ರಲ್ಲಿ ಪೊಲೀಸ್ ವೆರಿಫಿಕೇಶನ್ ಅವಧಿ 18 ದಿನಕ್ಕೆ ಇಳಿದಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಕಡಿತ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜೈಶಂಕರ್ ಹೇಳಿದರು.