ಬೆಂಗಳೂರು, ಜು. 21 (DaijiworldNews/AK): ಕರ್ನಾಟಕ ರಾಜ್ಯದಲ್ಲಿ ಗಣ್ಯ ವ್ಯಕ್ತಿಗಳು( VIP) ಸಂಚಾರ ವೇಳೆ ಸೈರನ್ ಬಳಕೆ ನಿಷೇಧಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ, ಐಜಿಪಿ ) ಡಾ.ಎಂ.ಎ.ಸಲೀಂ ಅವರು ಇಂದು (ಜುಲೈ 21) ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸೈರನ್ ನಿಷೇಧಿಸಲಾಗಿದೆ. ಹಾಗೇ ಸೈರನ್ ಬಳಕೆ ಮಾಡುವುದರಿಂದ ಗಣ್ಯ ವ್ಯಕ್ತಿಗಳು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆ. ಈ ಹಿನ್ನೆಲೆಯಲ್ಲಿ ಸೈರನ್ ಬಳಕೆಯಿಂದ ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಇದರಿಂದ ವಿಐಪಿ ಸಂಚಾರದ ಸಂದರ್ಭದಲ್ಲಿ ವಾಹನಗಳ ಸೈರನ್ ಬಳಕೆಗೆ ಕಡಿವಾಣ ಹಾಕುವಂತೆ ಡಿಜಿ, ಐಜಿಪಿ ಆದೇಶಿಸಿದ್ದಾರೆ.
ಸಾರ್ವಜನಿಕ ರಸ್ತೆಗಳ ಮೇಲೆ ಹಠಾತ್ತಾಗಿ ಸೈರನ್ ಬಳಸುವುದರಿಂದ ಇತರ ವಾಹನ ಚಾಲಕರಿಗೆ ತೊಂದರೆಯಾಗುತ್ತದೆ. ಸೈರನ್ ಬಳಕೆಯಿಂದ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಿಸಿ ಬೆಂಗಾವಲು ಅಪಘಾತ ಉಂಟಾಗುವ ಸಾಧ್ಯತೆ ಇರುತ್ತದೆ. ವಿಐಪಿ ಸಂಚಾರದ ವೇಳೆ, ತುರ್ತು ಚಲನವಲನದ ಅವಶ್ಯಕತೆಗಳಿಗೆ ವೈರ್ಲೆಸ್ ಕಮ್ಯುನಿಕೇಶನ್ ಮುಖಾಂತರ ಮಾಹಿತಿ ವಿನಿಮಯ ಮಾಡಬೇಕು. ಸೈರನ್ಗಳನ್ನು ಕೇವಲ ಅಂಬ್ಯುಲೆನ್ಸ್, ಪೊಲೀಸ್ , ಅಗ್ನಿಶಾಮಕ ವಾಹನಗಳು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕೆಂದು ಡಿಜಿ, ಐಜಿಪಿ ಎಂ.ಎ.ಸಲೀಂ ಆದೇಶದಲ್ಲಿ ಸೂಚಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ತುರ್ತು ಸೇವೆಯ ವಾಹನಗಳನ್ನು ಬಿಟ್ಟು ಇನ್ಯಾರೂ ಸೈರನ್ ಬಳಸುವಂತಿಲ್ಲ. ಹಾಗೆಯೇ ಪೊಲಿಸ್ ಸೈರನ್ ಬಳಸುವಂತಿಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ, ಪೊಲೀಸ್ ಅಂಬ್ಯುಲೆನ್ಸ್, ಅಗ್ನಿ ಶಾಮದಳ ವಾಹನಗಳು ಮಾತ್ರ ಈ ಸೈರನ್ ಬಳಕೆ ಮಾಡಬಹುದಾಗಿದೆ. ಇನ್ನು ನಿಯಮ ಉಲ್ಲಂಘಿಸಿದರೆ ಮೋಟರ್ ವಾಹನ ಕಾಯಿದೆ 190(2( ಪ್ರಕಾರ ದಂಡ ಜತೆಗೆ ಮೂರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಬಹುದು.