ದಾವಣಗೆರೆ, ಜು. 21 (DaijiworldNews/AK): ನವೆಂಬರ್ನಲ್ಲಿ ಆಗುವ ರಾಜಕೀಯ ಕ್ರಾಂತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಲಿತರಾದಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಮೊನ್ನೆ ಮೈಸೂರಿನಲ್ಲಿ ನಡೆದುದು ಕಾಂಗ್ರೆಸ್ ಸರಕಾರದ ಸಾಧನಾ ಸಮಾವೇಶ ಅಲ್ಲ; ಅದು ಸಿದ್ದರಾಮಯ್ಯನವರ ಒಂದು ಶಕ್ತಿ ಪ್ರದರ್ಶನ. ಇದರ ಮೂಲಕ ಕಾಂಗ್ರೆಸ್ ಹೈಕಮಾಂಡನ್ನು ಬೆದರಿಸುವ ತಂತ್ರ ನಡೆದಿದೆ ಎಂದು ನುಡಿದರು.
ಸಿದ್ದರಾಮಯ್ಯನವರು ಮಾಡುವ ತಂತ್ರ- ಕುತಂತ್ರಗಳು ನಮಗೆ ಸಂಬಂಧಿಸಿಲ್ಲ ಎಂದು ತಿಳಿಸಿದರು. ರಾಜ್ಯದ ಜನರು ಈ ಕಾಂಗ್ರೆಸ್ ಸರಕಾರದ ಬಗ್ಗೆ ಹತಾಶರಾಗಿದ್ದಾರೆ. ಯಾವ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದರೋ ಅದೇ ಜನರು ಭ್ರಷ್ಟಾಚಾರದಲ್ಲಿ ಮುಳುಗಿದ ಈ ಸರಕಾರದ ಕುರಿತು, ಅಭಿವೃದ್ಧಿ ಶೂನ್ಯ ಸರಕಾರದ ಬಗ್ಗೆ ಜಿಗುಪ್ಸೆಗೊಂಡಿದ್ದಾರೆ. ಹಾಗಾಗಿಯೇ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೋ ಎಂಬಂಥ ವಿಚಾರದಲ್ಲಿ ನಾಡಿನ ಜನರಲ್ಲಿ ಆಸಕ್ತಿ ಇಲ್ಲ ಎಂದು ನುಡಿದರು.
ಇಂಥ ಬಡಜನರ ವಿರೋಧಿ, ರೈತರ ವಿರೋಧಿ, ಅಭಿವೃದ್ಧಿ ವಿರೋಧಿ ಸರಕಾರದ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದೆ. ಇವರ ಬಂಡವಾಳವನ್ನು ಬಯಲು ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ಹೇಳಿದರು.
ದೆಹಲಿಗೆ ಹೋದ ಮುಖಂಡರದು ರೆಬೆಲ್ಸ್ ಟೀಂ ಎಂದು ಕರೆಯಲು ನಾನು ತಯಾರಿಲ್ಲ. ಒಂದು ರಾಜಕೀಯ ಪಕ್ಷದಲ್ಲಿ ಅವರದೇ ಆದ ಅಭಿಪ್ರಾಯ ಇರುತ್ತದೆ. ಅಭಿಪ್ರಾಯ ಬೇರೆ ಇದ್ದೊಡನೆ ಅವರು ಭಿನ್ನಮತೀಯರು ಅಥವಾ ರೆಬೆಲ್ಸ್ ತಂಡ ಎಂದು ಕರೆಯುವುದು ಸರಿಯಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು
25 ವರ್ಷಗಳ ನಂತರ ದಾವಣಗೆರೆಯಲ್ಲಿ ಒಂದು ಐತಿಹಾಸಿಕ ಕಾರ್ಯಕ್ರಮ ನಡೆದಿದೆ. ಪಂಚ ಪೀಠಾಧೀಶ್ವರರು 25 ವರ್ಷಗಳ ನಂತರ ದಾವಣಗೆರೆಯಲ್ಲಿ ಸಮಾಗಮಗೊಂಡಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಶಿವಾಚಾರ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಜಾತಿ ಜನ ಗಣತಿ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಇದರ ಕುರಿತು ಚರ್ಚೆ ಆಗಬೇಕು. ಕೇಂದ್ರ ಸರಕಾರವು ನಿರ್ಧರಿಸಿದಂತೆ ಜನ ಗಣತಿ, ಜಾತಿ ಗಣತಿ ವಿಚಾರದಲ್ಲಿ ಸ್ಪಷ್ಟತೆ ಇರಬೇಕೆಂಬ ವಿಷಯ ಸೇರಿ ಹಲವಾರು ಚರ್ಚೆ ಆಗಿದೆ. ವೀರಶೈವ ಮಹಾಸಭಾ ಜೊತೆ ಚರ್ಚಿಸಿ ಒಂದು ಸಮಿತಿ ಮಾಡಿ, ಕೇಂದ್ರ ಸರಕಾರಕ್ಕೂ ಮನವಿ ಮಾಡಬೇಕು. ಧರ್ಮ, ಒಳಪಂಗಡಗಳು ಎಲ್ಲವುಗಳಿಗೆ ಅವಕಾಶ ಲಭಿಸಬೇಕು. ಅನೇಕ ಕುಲಕಸುಬುಗಳೂ ಇವೆ. ಇವೆಲ್ಲವೂ ಗೊಂದಲ ಆಗದೇ ವೀರಶೈವ ಲಿಂಗಾಯತ ಸಮುದಾಯ ಒಟ್ಟಾಗಿ, ಒಂದಾಗಿ ಮುಂದೆ ಸಾಗಬೇಕೆಂಬ ವಿಚಾರಗಳ ಚರ್ಚೆ ಆಗಿದೆ ಎಂದರು
ಪಂಚ ಪೀಠಾಧೀಶ್ವರರು ಸಮಾಜದ ಮುಖಂಡರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕುಳಿತು ಚರ್ಚಿಸಲಿದ್ದೇವೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ, ಬಿ.ಎಸ್.ಯಡಿಯೂರಪ್ಪ, ಈಶ್ವರ ಖಂಡ್ರೆ, ಜಗದೀಶ ಶೆಟ್ಟರ್ ಸೇರಿದಂತೆ ಸಮಾಜದ ಮುಖಂಡರು ಮುಂದೆ ಸಮಾಜಕ್ಕೆ ಯಾವ ರೀತಿ ದಾರಿ ತೋರಿಸಬೇಕೆಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.