ನವದೆಹಲಿ, ಜು. 21 (DaijiworldNews/AK): ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು , ಎಸ್ಸಿ-ಎಸ್ಟಿ ಹಾಗೂ ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸುವ ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯಡಿ ಇಡೀ ದೇಶದಲ್ಲೇ ಕರ್ನಾಟಕ ರಾಜ್ಯಕ್ಕೆ ಅತಿಹೆಚ್ಚಿನ ಸಾಲದ ನೆರವು ನೀಡಿದೆ. ಈ ಯೋಜನೆಯಡಿ 2018 ರಿಂದ ಈಚೆಗೆ ಒಟ್ಟು 2,946 ಕೋಟಿ ರೂ. ಬ್ಯಾಂಕ್ ಸಾಲವನ್ನು ಮಂಜೂರು ಮಾಡಲಾಗಿದ್ದು, ಆ ಮೂಲಕ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಹಣಕಾಸು ಸಚಿವಾಲಯ ನೀಡಿರುವ ಉತ್ತರದ ಪ್ರಕಾರ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ.
ಹಿಂದುಳಿದ ಸಮುದಾಯಗಳನ್ನು ಸ್ವಂತ ಉದ್ಯಮ ಸ್ಥಾಪಿಸಿ ಸ್ವಾವಲಂಬಿಯಾಗಿಸುವ ಮೂಲಕ ಯುವ ಉದ್ದಿಮೆದಾರರನ್ನು ತಯಾರಿಸುವಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಬ್ಯಾಂಕ್ಗಳಿಂದ ಕರ್ನಾಟಕಕ್ಕೆ ಹೆಚ್ಚಿನ ಸಾಲದ ನೆರವನ್ನು ಕೇಂದ್ರ ಸರ್ಕಾರ ನೀಡಿದೆ. 2018ರ ಏಪ್ರಿಲ್ನಿಂದ 2025ರ ಮಾರ್ಚ್ ಅವಧಿಯಲ್ಲಿ ಒಟ್ಟು 13,389 ಸಾಲದ ಖಾತೆಗಳನ್ನು ಹೊಂದಿವೆ. ಈ ಯೋಜನೆಯು 2016ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿವರೆಗೆ 16,846 ಸಾಲದ ಖಾತೆಗಳನ್ನು ಹೊಂದುವ ಮೂಲಕ ಒಟ್ಟು 3,750.40 ಕೋಟಿ ರೂ. ಸಾಲವನ್ನು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಕರ್ನಾಟಕದ ಅರ್ಹ ಫಲಾನುಭವಿಗಳು ಪಡೆದುಕೊಂಡಿದ್ದಾರೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ ಮಹಿಳೆಯರು ಒಳಗೊಂಡಂತೆ ಪರಿಶಿಷ್ಟ ಜಾತಿಯ ಫಲಾನುಭವಿಗಳು 3,108 ಖಾತೆಗಳನ್ನು ಹೊಂದಿದ್ದು, 661.10 ಕೋಟಿ ಸಾಲ ನೀಡಲಾಗಿದೆ. ಹಾಗೆಯೇ ಪರಿಶಿಷ್ಟ ಪಂಗಡದವರು 868 ಖಾತೆಗಳನ್ನು ಹೊಂದಿದ್ದು, 166.96 ಕೋಟಿ ಬ್ಯಾಂಕ್ ಸಾಲ ಒದಗಿಸಲಾಗಿದೆ. ಇನ್ನು ಸಾಮಾನ್ಯ ಮಹಿಳಾ ವಿಭಾಗದಡಿ 12,870 ಸಾಲದ ಖಾತೆಯನ್ನು ಹೊಂದಿದ್ದು, 2,922.34 ಕೋಟಿ ರೂ. ಸಾಲ ನೀಡಲಾಗಿದೆ. ಆ ಮೂಲಕ ಮೋದಿ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಕರ್ನಾಟಕದ ಫಲಾನುಭವಿಗಳಿಂದ ಅತಿ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಈ ಅಭೂತಪೂರ್ವ ಸ್ಪಂದನೆಯನ್ನು ಶ್ಲಾಘಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಕರ್ನಾಟಕದಲ್ಲಿ ಸಾವಿರಾರು ಮಂದಿಯನ್ನು ಉದ್ದಿಮೆದಾರರನ್ನಾಗಿ ರೂಪಿಸುವಲ್ಲಿ ಬಹುದೊಡ್ಡ ಮಟ್ಟದಲ್ಲಿ ನೆರವಾಗಿದೆ. ಅದರಲ್ಲಿಯೂ ಶೋಷಿತ ಸಮಾಜದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಯುವ ಉದ್ದಿಮೆದಾರರನ್ನು ಕೂಡ ತಮ್ಮ ಸ್ವಂತ ಕಾಲ ಮೇಲೆ ನಿಂತು ಉದ್ಯಮವನ್ನು ಕಟ್ಟಿ ಬೆಳೆಸುವುದಕ್ಕೆ ಮೋದಿ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್ ಸಾಲವನ್ನು ನೀಡಿರುವುದು ನಿಜಕ್ಕೂ ಗಮನಾರ್ಹವಾದದ್ದು. ಕೇಂದ್ರ ಸರ್ಕಾರವು ಈ ಯೋಜನೆಯಡಿ ಕರ್ನಾಟಕದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ದಿಮೆದಾರ ಆಕಾಂಕ್ಷಿಗಳನ್ನು ಆರ್ಥಿಕ ಸೇರ್ಪಡೆಗೊಳಿಸುವಲ್ಲಿ ಭದ್ರ ಅಡಿಪಾಯವನ್ನು ಹಾಕುತ್ತಿದೆ ಎನ್ನುವುದಕ್ಕೆ ಕಳೆದ ಕಳೆದ ಐದಾರು ವರ್ಷಗಳಲ್ಲಿ ನೀಡಿರುವ ಬ್ಯಾಂಕ್ ಸಾಲದ ಪ್ರಮಾಣವೇ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಸ್ವಂತ ಉದ್ದಿಮೆ ಸ್ಥಾಪಿಸುವುದಕ್ಕೆ 10 ಲಕ್ಷ ರೂ.ವಿನಿಂದ ಒಂದು ಕೋಟಿ ರೂ.ವರೆಗೆ ವಾಣಿಜ್ಯ ಬ್ಯಾಂಕ್ಗಳಿಂದ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ವಿಶೇಷವಾಗಿ ಉತ್ಪಾದನೆ, ಸೇವಾ ಕ್ಷೇತ್ರ, ವ್ಯಾಪಾರ ಮತ್ತು ಸಂಬಂಧಿತ ಕೃಷಿ ವಲಯಗಳಲ್ಲಿನ ಗ್ರೀನ್ಫೀಲ್ಡ್ ಯೋಜನೆಗಳಿಗೆ ಆರ್ಥಿಕ ಸಹಾಯ ನೀಡುತ್ತದೆ.