ಕೋಲ್ಕತ್ತಾ, ಜೂ 25 (Daijiworld News/MSP): ನಿಯೋ -ಜಮಾತ್ - ಉಲ್ - ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ನಾಲ್ವರು ಉಗ್ರರನ್ನು ಎಸ್ಟಿಎಫ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇವರಲ್ಲಿ ಇಬ್ಬರನ್ನು ಸೀಲ್ಡಾದ ರೈಲು ನಿಲ್ದಾಣದ ವಾಹನ ನಿಲ್ದಾಣ ಪ್ರದೇಶದಲ್ಲಿ ಹಾಗೂ ಮತ್ತಿಬ್ಬರನ್ನು ಹೌರಾದ ರೈಲು ಸ್ಟೇಷನ್ ಬಳಿ ಬಂಧಿಸಲಾಗಿದೆ.
ಬಂಧಿತರಲ್ಲಿ ಮೂವರು ಬಾಂಗ್ಲಾದೇಶದ ಪ್ರಜೆಗಳು ಎನ್ನುವುದು ಖಚಿತವಾಗಿದೆ. ಈ ಪೈಕಿ ಓರ್ವನನ್ನು ಜಿಯಾ ಉರ್ ರೆಹೆಮಾನ್ ಮತ್ತು ಮತ್ತೋರ್ವನನ್ನು ಮಮನೂರ್ ರಶೀದ್ ಎಂದು ಗುರುತಿಸಲಾಗಿದೆ. ಇವರು ಸೀಲ್ಡಾದಲ್ಲಿ ಸಿಕ್ಕಿಬಿದ್ದಿದ್ದರು.
ಮತ್ತಿಬ್ಬ ಶಂಕಿತ ಉಗ್ರರನ್ನು ಸಾಹಿನ್ ಅಲಾಂ ಮತ್ತು ರೊಬಿ ಉಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು ಇಬ್ಬರನ್ನು ಹೌರಾದಲ್ಲಿ ವಶಕ್ಕೆ ಪಡೆಯಲಾಗಿದೆ. ಸಾಹಿನ್ ಅಲಾಂ ಬಾಂಗ್ಲಾದೇಶದವನಾಗಿದ್ದಾನೆ. ಇನ್ನು ರೊಬಿ ಉಲ್ ಇಸ್ಲಾಂ ಪಶ್ಚಿಮ ಬಂಗಾಳದ ಬಿರ್ಭೂಮ್ನವನಾಗಿದ್ದಾನೆ.
ಉಗ್ರರ ಮೊಬೈಲ್ಗಳಲ್ಲಿ ಜಿಹಾದಿ ಫೋಟೋಗಳು, ವಿಡಿಯೋಗಳು ಮತ್ತು ಬರಹಗಳು ಪತ್ತೆಯಾಗಿವೆ. ಇವರು ಉಗ್ರರ ಜಾಲ ವಿಸ್ತರಿಸುವ ಮತ್ತು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಸಂಘಟನೆಗಾಗಿ ಉಗ್ರರ ನೇಮಕಾತಿ ಮತ್ತು ಹಣ ಸಂಗ್ರಹಿಸುವಲ್ಲಿ ಕಾರ್ಯನಿರತರಾಗಿದ್ದರು ಎಂದು ತಿಳಿದು ಬಂದಿದೆ.